ಎರಡು ತಿಂಗಳಲ್ಲಿ ವರ್ಗಾವಣೆಗಳಿಂದ 500 ಕೋಟಿ ರೂ. ವ್ಯವಹಾರ ಆಗಿದೆ | JANATA NEWS

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎರಡು ತಿಂಗಳಲ್ಲಿ ವರ್ಗಾವಣೆಗಳಿಂದ 500 ಕೋಟಿ ರೂ. ವ್ಯವಹಾರ ಆಗಿದೆ ಎಂದು ಸರ್ಕಾರದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ವರ್ಗಾವಣೆಯಲ್ಲೇ ಕಳೆದ ಎರಡು ತಿಂಗಳಲ್ಲಿ 500 ಕೋಟಿ ರೂ. ವ್ಯವಹಾರ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ರೀತಿ ಆದರೆ ರಾಜ್ಯ ಉಳಿಯುತ್ತಾ?. ಇವುಗಳಿಗೆ ಎಲ್ಲಿಂದ ದಾಖಲೆ ತರುವುದು? ಎಂದು ಪ್ರಶ್ನಿಸಿದರು.
ಮೊನ್ನೆ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೇಟ್ ಕಾರ್ಡ್ ತೋರಿಸಿದ್ದೆ. ಅದಕ್ಕೆ ಪ್ರತಿಯಾಗಿ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಿಕಾ ವರದಿಯನ್ನು ತೋರಿಸಿದ್ದರು. ನನ್ನ ಕಾಲದಲ್ಲಿ ಲಂಚ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಯಾವುದಪ್ಪ ನನ್ನ ಕಾಲದಲ್ಲಿ ಅವ್ಯವಹಾರ ಆಗಿದೆ ಎಂದು ನಾನೇ ಭಯಗೊಂಡೆ. ಪತ್ರಿಕಾ ವರದಿ ತರಿಸಿ ನೋಡಿದೆ. ಅದರಲ್ಲಿ 2008 -2013 ರಲ್ಲಿ ಮಾಗಡಿ ಕ್ಷೇತ್ರದಲ್ಲಿ 600 ಕೋಟಿ ರೂ. ಅಕ್ರಮದ ಬಗ್ಗೆ ತಿಳಿಸಿದ್ದಾರೆ.
ಇದು ನಾನು ಸಿಎಂ ಆಗುವ ಮೊದಲು ಆಗಿದ್ದ ಪ್ರಕರಣ. 40% ಕಮಿಷನ್ ಹೇಳುತ್ತರಲ್ಲಾ ಇವರು, ಈ ಪತ್ರಿಕಾ ವರದಿಯಲ್ಲಿ 58% ಕಮಿಷನ್ ಎಂದು ಬರೆದಿದ್ದಾರೆ. ವಿಧಾನಸೌಧದಿಂದಲೇ ಪಿಡಿಒಗಳ ವರ್ಗಾವಣೆ ಆಗುತ್ತಿವೆ. ವರ್ಗಾವಣೆ ದಂಧೆ ಬಗ್ಗೆ ಅಧಿಕಾರಿಗಳೇ ಹೇಳಿದ್ದಾರೆ. ಈ ಮಟ್ಟದ ದಂಧೆ ನಾನು ಎಲ್ಲಿಯೂ ನೋಡಿಲ್ಲ. ನನ್ನ ಕಾಲದಲ್ಲಿ ಇಂತಹ ಹಗರಣ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿಯವರು ಸರ್ಕಾರಕ್ಕೆ ಸವಾಲು ಹಾಕಿದರು.