ಹೊರರಾಜ್ಯಗಳ ರಾಜಕಾರಣಿಗಳ ಚಾಕರಿ ಮಾಡಲು ಐಎಎಸ್ ಅಧಿಕಾರಿಗಳು...ಪ್ರಶ್ನಿಸಿದ ಪ್ರತಿಪಕ್ಷ ಶಾಸಕರ ಅಮಾನತು.. ಪ್ರಜಾಪ್ರಭುತ್ವದ ಕಗ್ಗೊಲೆ | JANATA NEWS

ಬೆಂಗಳೂರು : ಸರ್ಕಾರದ ಅಸಂವಿಧಾನಿಕ ನಡೆಯನ್ನು ಪ್ರಶ್ನಿಸಿದ ಪ್ರತಿಪಕ್ಷ ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ, ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಸಂಜೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಒಂದು ದಿನದ ಹಿಂದೆ ' ಇಂಡಿಯಾ ' ಎಂದು ಬೆಂಗಳೂರಿನಲ್ಲಿ ಜಪ ಮಾಡಿದ್ದ ಕಾಂಗ್ರೆಸ್ ಪಕ್ಷ, 24 ಗಂಟೆ ಒಳಗಾಗಿ ಇದೇ ನಗರದಲ್ಲಿ ಇಂಡಿಯಾ ಎನ್ನುವ ಇಡಿಯಾದ ಆದರ್ಶ ಪರಿಕಲ್ಪನೆಗೆ ಎಳ್ಳುನೀರು ಬಿಟ್ಟಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲದ ಕಾಂಗ್ರೆಸ್, ಸಾಂವಿಧಾನಿಕ ಮೌಲ್ಯಗಳನ್ನು ಕಸಕ್ಕೆ ಸಮ ಎನ್ನುವಂತೆ ವರ್ತಿಸಿದೆ.
ನಿನ್ನೆ ಪಂಚತಾರಾ ಹೋಟೆಲಿನಲ್ಲಿ ನಡೆದ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳ ಸಭೆಗೆ ಬಂದಿದ್ದ ಶಿಷ್ಟಾಚಾರಕ್ಕೆ ಅರ್ಹರಲ್ಲದ ಹೊರರಾಜ್ಯಗಳ ರಾಜಕಾರಣಿಗಳಿಗೆ ಚಾಕರಿ ಮಾಡಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದ ನಿರ್ಲಜ್ಜ ಕ್ರಮ ಪ್ರಶ್ನಿಸಿದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಹೇಯ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಪಕ್ಷ ಸರಕಾರ ಮಾಡಿದೆ.
ಈ ಅಸಂವಿಧಾನಿಕ ನಡೆಯನ್ನು ಪ್ರಶ್ನಿಸಿದ ಪ್ರತಿಪಕ್ಷ ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಬರೀ ನಾಲಿಗೆಯ ಮೇಲೆ ಪ್ರಜಾಪ್ರಭುತ್ವ ಉಳಿಸುತ್ತೇನೆ ಎನ್ನುವ ಕಾಂಗ್ರೆಸ್, ತನ್ನದೇ 'ಹಸ್ತ'ದಿಂದ ಅದೇ ಪ್ರಜಾಪ್ರಭುತ್ವವನ್ನು ಅಡ್ಡಡ್ಡ ಸಿಗಿದು ನಿರ್ನಾಮ ಮಾಡುತ್ತಿದೆ. ಇದೇನಾ ಕರ್ನಾಟಕ ಮಾಡೆಲ್???
ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸಿ, ಉತ್ತರ ನೀಡುವುದು ನಾಗರಿಕ ಸರಕಾರದ ಕರ್ತವ್ಯ. ಆದರೆ, ಅನಾಗರಿಕತೆಯನ್ನೇ ಅರೆದು ಕುಡಿದಷ್ಟು, ಅನಾಗರಿಕತೆಯೇ ನಾಚಿ ನಿಟ್ಟುಸಿರು ಬಿಡುವಷ್ಟು ಹೀನಾಯವಾಗಿ ರಾಜ್ಯ ಕಾಂಗ್ರೆಸ್ ಸರಕಾರ ವರ್ತಿಸಿದೆ.
ಶತಮಾನಕ್ಕೂ ಹೆಚ್ಚಿನ ಇತಿಹಾಸ ನನ್ನದು ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಪ್ರಜಾಸತ್ತೆಗೆ ಶಾಪ. ಜನತಂತ್ರದ ಮೇಲೆ ದರ್ಪ ತೋರಿಸಿದ ಆ ಪಕ್ಷಕ್ಕೆ ತಿಳಿದಿರಲಿ. ಇಂಡಿಯಾ ಎಂದರೆ ಇದಲ್ಲವೇ ಅಲ್ಲ, ಇಂಡಿಯಾ ಎಂದರೆ ಪ್ರಜಾಪ್ರಭುತ್ವ. ಇಂಡಿಯಾ ಎಂದರೆ ಇವರಷ್ಟೇ ಅಲ್ಲ, ನಾವೆಲ್ಲರೂ... , ಎಂದು ಸರಣಿ ಟ್ವೀಟ್ ಮಾಡಿದ್ದಾರೆ.