ಪ್ರಿಯಕರ ಮತ್ತೊಬ್ಬಳ ಜೊತೆ ಸುತ್ತಾಡಿದ, ಇಲಿ ಪಾಷಾಣ ತಿಂದು ಆತ್ಮಹತ್ಯೆ ಮಾಡಿಕೊಂಡ ಯುವತಿ | JANATA NEWS

ಮೈಸೂರು : ಪ್ರಿಯಕರ ಮತ್ತೊಬ್ಬಳ ಜೊತೆ ಸುತ್ತಾಡಿದ ಹಿನ್ನೆಲೆಯಲ್ಲಿ ಯುವತಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿಸರ್ಗ(20) ಮೃತ ಯುವತಿ. ಪ್ರಿಯಕರನಿಂದ ಮೋಸ ಹೋಗಿ, ಅದೇ ದುಃಖದಲ್ಲಿ ಜು.9ರಂದು ಇಲಿ ಪಾಷಾಣ ಸೇವಿಸಿ ನಿಸರ್ಗ, ಪಾಲಕರಿಗೂ ತಿಳಿಸದೇ ಒಂದು ವಾರ ನೋವಿನಿಂದಲೇ ನರಳಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ನಿಸರ್ಗ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಈಕೆ ಅದೇ ಕಾಲೇಜಿನಲ್ಲಿ ಓದುತ್ತಿರುವ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ನಾಲ್ಕು ವರ್ಷಗಳ ಕಾಲ ಈ ಜೋಡಿ ಊರೂರು ಸುತ್ತಾಡಿದೆ. ನಂತರ ಸುಹಾಸ್ ಗೆ ಅನನ್ಯಾ ಎಂಬ ಮತ್ತೊಬ್ಬಳ ಜೊತೆ ಲವ್ ಆಗಿದೆ. ಈ ವಿಚಾರ ತಿಳಿದಾಗಿನಿಂದ ನಿಸರ್ಗ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು.
ಸುಹಾಸ್ ಅನನ್ಯ ಎಂಬ ಮತ್ತೊಂದು ಹುಡುಗಿಯನ್ನು ಪ್ರೀತಿಸಿ ನನಗೆ ಮೋಸ ಮಾಡಿದ. ಅಲ್ಲದೆ, ನನ್ನ ಮುಂದೆಯೇ ಸುತ್ತಾಡಿ ನನಗೆ ಮಾನಸಿಕವಾಗಿ ಹಿಂಸೆ ನೀಡಿ ನೀನು ಇನ್ನೂ ಏಕೆ ಬದುಕಿದಿಯಾ ಸಾಯಿ ಎಂದು ಪದೇ ಪದೇ ಹೇಳುತ್ತಿದ್ದರು.
ಅವರಿಬ್ಬರ ವರ್ತನೆಯಿಂದ ಮನನೊಂದು ಪ್ರೀತಿಯ ವಿಚಾರವನ್ನು ಅನನ್ಯಳ ತಂದೆ ಗೋಪಾಲಕೃಷ್ಣ ಅವರಿಗೂ ತಿಳಿಸಿದೆ. ಆದರೆ, ಅವರು ನನಗೆ ಬಾಯಿಗೆ ಬಂದಂತೆ ನಿಂದಿಸಿ, ಸಾಯಿ ಎಂದರು.
ಬಳಿಕ ಸುಹಾಸ್ ರೆಡ್ಡಿ ತಂದೆ ಬಾಬುರೆಡ್ಡಿ, ತಾಯಿ ರೂಪ ಅವರಿಗೂ ನಮ್ಮ ಪ್ರೀತಿಯ ವಿಚಾರವನ್ನು ತಿಳಿಸಿದೆ. ಅವರು ಸಹ ನನಗೆ ಬಾಯಿಗೆ ಬಂದಂತೆ ಬೈಯ್ದು ಅವಮಾನ ಮಾಡಿದರು.
ಯಾರೂ ಕೂಡ ಸಹ ನನ್ನ ಸಹಾಯಕ್ಕೆ ಬರಲಿಲ್ಲ, ಎಲ್ಲರೂ ನನ್ನನ್ನು ನಿಂದಿಸಿ ಪದೇಪದೆ ಸಾಯಿ ಎಂದು ಪ್ರೇರಣೆ ನೀಡಿದ್ದರಿಂದ ನಾನು ಮನೆಯಲ್ಲಿದ್ದ ಇಲಿಪಾಷಾಣವನ್ನು ಸೇವಿಸಿದೆ ಮತ್ತು ಭಯದಿಂದ ಮನೆಯಲ್ಲಿ ಈ ವಿಚಾರವನ್ನು ಯಾರಿಗೂ ತಿಳಸಲಿಲ್ಲ ಎಂದು ಸಾಯುವ ಮುನ್ನ ನಿಸರ್ಗ ಹೇಳಿದ್ದಾಳೆ ಎನ್ನಲಾಗಿದೆ. ಡೆತ್‍ನೋಟ್ ಬರೆದಿಟ್ಟು ಬ್ಯಾಗ್‍ನಲಿಟ್ಟುಕೊಂಡು ನಿಸರ್ಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.