ಗೃಹ ಲಕ್ಷ್ಮಿ ನೋಂದಣಿಗೆ ಹಣ ಕೇಳುವ ಸೈಬರ್ ಸೆಂಟರ್‌ಗಳ ಪರವಾನಗಿ ರದ್ದು | JANATA NEWS
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ 'ಗೃಹಲಕ್ಷ್ಮಿ' ಯೋಜನೆ ಜಾರಿಯಾಗಿದೆ. ಮನೆ ಯಜಮಾನಿಗೆ ಮಾಸಿಕ 2000 ನೀಡುವ ಈ 'ಗೃಹಲಕ್ಷ್ಮಿ' ಯೋಜನೆಗೆ ಆನ್ಲೈನ್ ಮೂಲಕ ಈಗಾಗಲೇ ನೋಂದಣಿ ಪ್ರಕ್ರಿಯೆ ಶುರುವಾಗಿದೆ.
ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್‌ಗಳು ವಿರುದ್ಧ ಸರ್ಕಾರ ಕಟ್ಟಪ್ಪಣೆ ಹೊರಡಿಸಿದೆ. ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳಿದ ಸೈಬರ್ ಸೆಂಟರ್‌ಗಳ ಪರವಾನಗಿಯನ್ನೇ ರದ್ದುಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೋಂದಣಿಗಾಗಿ ಹಣವನ್ನು ಸಂಗ್ರಹಿಸಲಾಗುತ್ತಿದೆ ಎಂಬ ದೂರಗಳು ಬಂದರೆ, ಅಂತಹ ಸೈಬರ್ ಸೆಂಟರ್‌ಗಳ ಪರವಾನಗಿಯನ್ನು ರದ್ದುಗೊಳಿಸುತ್ತೇವೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಫಲಾನುಭವಿಗಳ ನೋಂದಣಿಗಾಗಿ ಧಾರವಾಡದ ಮೂರು ಸೈಬರ್ ಕೇಂದ್ರಗಳು ಹಣವನ್ನು ವಸೂಲು ಮಾಡುತ್ತಿದ್ದವು. ಈ ಕುರಿತು ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ಸೈಬರ್ ಕೇಂದ್ರಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೂರು ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ತಹಶೀಲ್ದಾರ್ ಆದೇಶಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣ ಠಾಣೆ ಪೊಲೀಸರು ಸೈಬರ್ ಸೆಂಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿಗಳ ನೋಂದಣಿ ಮಾಡಿಸಿ ಅಕ್ರಮವಾಗಿ ಹಣ ಪಡೆಯಲಾಗಿತ್ತು. ದೂರಿನ ಆಧಾರದ ಮೇಲೆ, ಮೂರು ಸೈಬರ್ ಕೇಂದ್ರಗಳ ವಿರುದ್ಧ ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಕೇಂದ್ರಗಳನ್ನು ಮುಚ್ಚಲು ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.