ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ಗಳ ವಿತರಣೆ: ಸಚಿವ ಕೆಎಚ್ ಮುನಿಯಪ್ಪ | JANATA NEWS
ಬೆಂಗಳೂರು : ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರ ಈಗ ಮಹತ್ವದ ಸಂದೇಶ ನೀಡಿದೆ. ಅತಿ ಶೀಘ್ರದಲ್ಲೇ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ಮಾತನಾಡಿ, ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಡೆಸಲಿದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಕೆಲವರು ಪಡಿತರ ಬೇಡ ಆರೋಗ್ಯ ಯೋಜನೆಗಳ ಲಾಭಕ್ಕಾಗಿ ಪಡಿತರ ಚೀಟಿ ನೀಡಿ ಎಂದು ಕೋರಿದ್ದಾರೆ. ಹಾಗಾಗಿ, ಇಂತಹವರಿಗೆ ಆದಷ್ಟು ಬೇಗ ಕಾರ್ಡ್ ನೀಡಲು ಕ್ರಮವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಸದ್ಯ 1.28 ಕೋಟಿ ಬಿಪಿಎಲ್ ಪಡಿತರದಾರರಿದ್ದು, ಇವರಲ್ಲಿ 97 ಲಕ್ಷ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ 30 ಲಕ್ಷ ಬಿಪಿಎಲ್ ಪಡಿತರದಾರರ ದತ್ತಾಂಶ ಮಾಹಿತಿಗಳು ಸರಿಯಿಲ್ಲ. ಇವೆಲ್ಲವನ್ನೂ ಸರಿಪಡಿಸಿ ಇವರಿಗೂ ಸಹ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆ ಯೋಜನೆಯ ಲಾಭ ಸಿಗುವಂತೆ ಕ್ರಮವಹಿಸಲಾಗುವುದು ಎಂದರು.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ನೀಡಲು ಇನ್ನೂ ಹಲವು ತಿಂಗಳು ತಡವಾಗಬಹುದು ಎಂದು ಸಚಿವ ಮುನಿಯಪ್ಪ ಹೇಳಿದರು. ಬಿಪಿಎಲ್ ಕಾರ್ಡ್‌ದಾರರಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ಹಾಕಲಾಗುತ್ತಿದೆ. ಒಂದು ಕೋಟಿ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅರ್ಹರಿಗೆ ಅನುಕೂಲ ಮಾಡಿಕೊಡುವುದು ಮತ್ತು ಅನರ್ಹರು ಈ ಯೋಜನೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.