ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್, ಸಹಾಯಕ್ಕೆ ಬಂದ ಇಬ್ಬರು ಸಾವು, ಮೂವರಿಗೆ ಗಾಯ | JANATA NEWS

ಮೈಸೂರು : ಕಾಂಪೌಂಡ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರನ್ನು ಹೊರತರಲು ಯತ್ನಿಸಿದ ಇಬ್ಬರು ಯುವಕರು ವಿದ್ಯುತ್ ಸಂಪರ್ಕ ಸಾಧಿಸಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.
ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಅಪಘಾತದ ಬಳಿಕ ಸಹಾಯಕ್ಕೆ ಬಂದ ಕಿರಣ್ ಹಾಗೂ ರವಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಮಾನಂದವಾಡಿ ರಸ್ತೆಯಲ್ಲಿ ರವಿಕುಮಾರ್, ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಆಶೋಕಾಪುರಂ ನತ್ತ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಕಾಂಪೌಂಡ್ ಗೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಕಾರಿನಿಂದ ನಾಲ್ವರೂ ಹೊರಬಂದ ನಂತರ ವಿದ್ಯುತ್ ತಂತಿ ಸಂಪರ್ಕ ಪಡೆದಿದೆ. ಕಾಂಪೌಂಡ್ ಹಾಗೂ ಕಂಬದ ನಡುವೆ ಸಿಲುಕಿದ ಕಾರನ್ನ ಹೊರತರಲು ಯತ್ನಿಸಿದ್ದಾರೆ.
ಆದರೆ ಸ್ಥಳದಲ್ಲೇ ವಿದ್ಯುತ್ ತಂತಿಯೊಂದು ತುಂಡಾಗಿದ್ದುದು ಯಾರಿಗೂ ತಿಳಿದಿರಲಿಲ್ಲ. ಯುವಕರು ಸಹಾಯಕ್ಕೆ ಆಗಮಿಸಿ ಕಾರನ್ನು ಎತ್ತಲು ಮುಂದಾದಾಗ ವಿದ್ಯುತ್ ತಂತಿ ತುಳಿದು ನಾಲ್ವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಘಟನೆಯಲ್ಲಿ ಕಿರಣ್ ಹಾಗೂ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಡೆಲಿವರಿ ಬಾಯ್‌ನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೂವರಿಗೆ ಗಾಯಗಳಾಗಿವೆ. ಕೆ.ಆರ್.ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ