ಮೈಸೂರು ದಸರಾ: ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರಂಟಿಗಳ ಸ್ತಬ್ಧಚಿತ್ರ | JANATA NEWS

ಬೆಂಗಳೂರು : ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರಂಟಿಗಳ ಬಗ್ಗೆ ತಿಳಿಸುವ ಸ್ತಬ್ಧಚಿತ್ರ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ'ಯ ಸಭೆಯ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿದ ಮಾತನಾಡಿದ ಅವರು, ಪ್ರಸಕ್ತ ವರ್ಷ 5 ಗ್ಯಾರಂಟಿಗಳ ಬಗ್ಗೆ ತಿಳಿಸುವ ಸ್ತಬ್ಧಚಿತ್ರ ಇರಲಿದೆ ಎಂದರು. ದಸರಾ ಹಬ್ಬವನ್ನು ಅಕ್ಟೋಬರ್ 15, 2023 ರಂದು ಬೆಳಗ್ಗೆ 10.15 ರಿಂದ 10.30 ರ ಸಮಯದಲ್ಲಿ ಉದ್ಘಾಟಿಸಲಾಗುವುದು.
ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಬಾರಿ ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಮಾಡಬೇಕು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಜಂಬೂ ಸವಾರಿ, ದೀಪಾಲಂಕಾರ, ಪಂಜಿನ ಕವಾಯತು ಬಹಳ ಮುಖ್ಯವಾಗಿ ಆಚರಿಸಲ್ಪಡುತ್ತದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ. ಜತೆಗೆ ಈ ಸಾರಿ ಸುತ್ತಮುತ್ತಲಿನ ಪ್ರದೇಶಗಳಿಗೂ ದೀಪಾಲಂಕಾರ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸ್ತಬ್ಧಚಿತ್ರಗಳ ಆಯ್ಕೆ ಮಾಡುವಾಗ ಐದು ಗ್ಯಾರಂಟಿಗಳನ್ನು ಪ್ರತಿಬಿಂಬಿಸುವ ಹಾಗೂ ಅವುಗಳ ಬಗ್ಗೆ ಜನರಿಗೆ ತಿಳಿಸುವಂಥದ್ದನ್ನು ಆಯ್ಕೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನಾಡಹಬ್ಬ ದಸರಾ ನೋಡಲು ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಸೌಕಾರ್ಯಗಳನ್ನು ಯಾವುದೇ ತೊಂದರೆಗಳಾಗದಂತೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷ ದಸರಾ ಅಂಗವಾಗಿ ಏರ್ ಶೋ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ವಿಚಾರವಾಗಿ ರಕ್ಷಣಾ ಸಚಿವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್, ಭೈರತಿ ಸುರೇಶ್, ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.