ತಾಕತ್ತಿದ್ದರೆ ದೇಶದ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ | JANATA NEWS

ಕಲಬುರಗಿ : ಬಿಜೆಪಿಗೆ ತಾಕತ್ತಿದ್ದರೆ ಐದು ಗ್ಯಾರಂಟಿಗಳನ್ನು ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನವನ್ನು ಮಾಡಲಿ ಎಂದು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇವತ್ತಿನ ದಿನ ಐತಿಹಾಸಿಕ ದಿನ. ಜ್ಯೋತಿ ಬೆಳಗಿಸುವ ಮೂಲಕ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಚಾಲನೆ ನೀಡಿದ್ದೇವೆ. ನಾವು ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲಿ ಭರವಸೆಗಳನ್ನು ಈಡೇರಿಸಿದ್ದೇವೆ. ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅನುದಾನವನ್ನೂ ಘೋಷಿಸಿದ್ದೇವೆ.
ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದೆವು. ನಾನು, ಡಿಕೆಶಿ ಗ್ಯಾರಂಟಿ ಕಾರ್ಡ್‌ಗೆ ಸಹಿ ಮಾಡಿ ಹಂಚಿದ್ದೆವು. ಜನ ಗ್ಯಾರಂಟಿ ನಂಬಿ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಹೇಳಿರುವಂತೆ, ಯೋಜನೆಗಳನ್ನು ಜಾರಿ ತಂದು ನಾವು ದಿವಾಳಿ ಆಗುವುದಿಲ್ಲ. ಹಿಂದೆ ಬಿಜೆಪಿ ಆಡಳಿತವಿದ್ದಾಗ ರಾಜ್ಯ ದಿವಾಳಿ ಆಗಿ, ನಿರುದ್ಯೋಗ ಸಮಸ್ಯೆ ಹೆಚ್ಚಿತ್ತು. ಈಗ ನಾವು ಜಾರಿಗೊಳಿಸಿರುವಂಥ ಗ್ಯಾರಂಟಿಗಳನ್ನು ಇಡೀ ದೇಶದಲ್ಲಿ ಜಾರಿ ತನ್ನಿ ಎಂದು ಪ್ರಧಾನಿಗೆ ಸವಾಲು ಹಾಕುತ್ತೇನೆ ಎಂದರು.
ವಿರೋಧ ಪಕ್ಷದವರು ಈ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ವಿರೋಧ ಪಕ್ಷದವರಲ್ಲದೇ ಈ ದೇಶದ ಪ್ರಧಾನಿಗಳು ಕೂಡ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ. ಈ ದೇಶವನ್ನು ದಿವಾಳಿ ಮಾಡಿರುವುದು ನರೇಂದ್ರ ಮೋದಿಯವರು.
ಕರ್ನಾಟಕ ಹಿಂದೆ ಎಲ್ಲ ಭರವಸೆಗಳನ್ನು ಈಡೇರಿಸಿದಾಗ ಆರ್ಥಿಕವಾಗಿ ಸುಭದ್ರವಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ, ಬೆಲೆ ಏರಿಕೆ ಮಾಡಿ, ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚು ಮಾಡಿ, ರಾಜ್ಯದ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.
ಗುಜರಾತ್ ಮಾಡಲ್ ಎಂದು ದೇಶದ ಜನರಿಗೆ ಭ್ರಮೆ ಹುಟ್ಟಿಸಿದ್ದರು. ಆದರೆ, ನಮ್ಮ ರಾಜ್ಯವನ್ನು ಗುಜರಾತ್ ಮಾಡಲು ನಾವು ಬಿಡುವುದಿಲ್ಲ. ನಮ್ಮದೇ ಆದ ಕರ್ನಾಟಕ ಮಾಡಲ್ ಮಾಡಿದ್ದೇವೆ. ನುಡಿದಂತೆ ನಡೆಯುವುದೇ ಕರ್ನಾಟಕ ಮಾಡಲ್ ಎಂದು ಹೇಳಿದರು.
ನಮ್ಮ ಸರ್ಕಾರ ಆಳಿತದಲ್ಲಿದ್ದಾಗ ಕಲ್ಯಾಣ ಕರ್ನಾಟಕದ 99,600 ಸೇರಿದಂತೆ ರಾಜ್ಯದಲ್ಲಿ 14.52 ಲಕ್ಷ ಮನೆ ಕಟ್ಟಿಸಿದ್ದೆವು ಆದರೆ ಬಿಜೆಪಿ ಸರ್ಕಾರ ಕಕ ಭಾಗದಲ್ಲಿ 19000 ಹಾಗೂ ರಾಜ್ಯದಲ್ಲಿ 7 ಲಕ್ಷ ಮನೆ ಕಟ್ಟಿಸಿದ್ದಾರೆ. ಕಕ ಭಾಗದ ಅಭಿವೃದ್ದಿಗೆ ನಮ್ಮ ಸರ್ಕಾರ ತನ್ನ ಬದ್ದತೆ ತೋರಿಸಿದೆ ಎಂದು ಹೇಳಿದ ಸಿಎಂ, ಬಿಜೆಪಿ ಸರ್ಕಾರ ಈ ಭಾಗದ ಹೆಸರನ್ನು ಮಾತ್ರ ಬದಲಾಯಿಸಿದೆ ಎಂದರು.
ಕೇಂದ್ರದ ಮೋದಿ ಸರ್ಕಾರ, ರಾಜ್ಯದಲ್ಲಿದ್ದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ನಾವು ಆರ್ಥಿಕವಾಗಿ ಹಿಂದೆ ಹೋಗಿದ್ದೆವೆ. ಆದ್ರೆ ಕಾಂಗ್ರೆಸ್ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಪ್ರತಿದಿನ 50 ಲಕ್ಷ ಹೆಣ್ಣುಮಕ್ಕಳು ಬಸ್ ನಲ್ಲಿ ಉಚಿತ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿ ಅವರಿಗೆ ಹೊಟ್ಟೆ ಉರಿ ಬಂದಿದೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಇಡೀ ದೇಶದಲ್ಲಿ ಈ ಯೋಜನೆ ಜಾರಿ ಮಾಡಲಿ ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸವಾಲ್ ಹಾಕಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸುತ್ತದೆ ಆದರೆ ಅಭಿವೃದ್ದಿ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ, ನಾವು ಗ್ಯಾರಂಟಿ ಜಾರಿಗೊಳಿಸುವುದರ ಜೊತೆಗೆ ಅಭಿವೃದ್ದಿಯನ್ನೂ ಕೂಡಾ ಮಾಡಲಿದ್ದೇವೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ನಾವು ಕೊಟ್ಟ ಭಾಷೆಯಂತೆ ಜನರಿಗೆ ನೀಡಿದ ವಾಗ್ಧಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.
ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದರ ಜೊತೆಗೆ ಮೂಲಕ ಪ್ರಣಾಳಿಕೆಯಲ್ಲಿ ಘೋಷಿಸಿರುವ 75 ಭರವಸೆಗಳನ್ನು ಬಜೆಟ್‌ಮೂಲಕ ಈಡೇರಿಸುತ್ತೇವೆ ಎಂದುಭರವಸೆ ನೀಡಿದ ಸಿಎಂ, ಪ್ರಧಾನಿ ಸೇರಿದಂತೆ ಬಿಜೆಪಿಯ ನಾಯಕರು ಈ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಶರಣಪ್ರಕಾಶ ಪಾಟೀಲ್ ದರ್ಶನಾಪುರ್, ಶಾಸಕರಾದ ಅಲ್ಲಂಪ್ರಭು, ಕನೀಜ್ ಫಾತಿಮಾ, ಬಿ.ಆರ್.ಪಾಟೀಲ್, ಎಂ.ವೈ ಪಾಟೀಲ್ ಉಪಸ್ಥಿತರಿದ್ದರು.
ಮುಖ್ಯಮಂತ್ರಿ @siddaramaiah ಅವರು ಇಂದು ಕಲಬುರ್ಗಿಯಲ್ಲಿ 'ಗೃಹ ಜ್ಯೋತಿ' ಯೋಜನೆಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿ @DKShivakumar, ಇಂಧನ ಸಚಿವ @thekjgeorge, ರಾಜ್ಯಸಭಾ ಸದಸ್ಯ ಹಾಗೂ ಎ.ಐ.ಸಿ.ಸಿ ಅಧ್ಯಕ್ಷರಾದ @kharge ಸೇರಿದಂತೆ ರಾಜ್ಯ ಸಚಿವ ಸಂಪುಟದ ಸದಸ್ಯರು, ಶಾಸಕರು ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. pic.twitter.com/jxcD0AOWWf
— CM of Karnataka (@CMofKarnataka) August 5, 2023