ಕುಮಾರಸ್ವಾಮಿ ಪೆನ್ ಡ್ರೈವ್ ನಲ್ಲಿ ಏನಿದೆಯೋ ಅದಕ್ಕೆ ಸರಿಸಮನಾಗಿ ನಮ್ಮ ಪೆನ್ ಡ್ರೈವ್ ನಲ್ಲೂ ದಾಖಲೆ ಇದೆ | JANATA NEWS

ಬೆಳಗಾವಿ : ಕುಮಾರಸ್ವಾಮಿ ಪೆನ್ ಡ್ರೈವ್ ನಲ್ಲಿ ಏನಿದೆಯೋ ಅದಕ್ಕೆ ಸರಿಸಮನಾಗಿ ನಮ್ಮ ಪೆನ್ ಡ್ರೈವ್ ನಲ್ಲೂ ದಾಖಲೆ ಇದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಾಂಬ್ ಸಿಡಿಸಿದ್ದಾರೆ.
ನನ್ನ ಹತ್ತಿರ ಪೆನ್‌ಡ್ರೈವ್ ಇರೋದು ಕಟು ಸತ್ಯ. ಸಂದರ್ಭ ಬಂದಾಗ ರಿಲೀಸ್ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನನ್ನ ಬಳಿ ಪೆನ್ ಡ್ರೈವ್ ಇರುವುದು ಕಟು ಸತ್ಯ ಸಮಯ ಸಂದರ್ಭ ಬಂದಾಗ ಪೆನ್ ಡ್ರೈವ್ ಹೊರ ಬರುತ್ತದೆ. ನನ್ನ ಮೇಲೆ ಎಷ್ಟು ಒತ್ತಡ ಹೆಚ್ಚಾಗುತ್ತದೆಯೋ ಅಷ್ಟು ಬೇಗ ರಿಲೀಸ್ ಮಾಡುತ್ತೇನೆ. ಪೆನ್ ಡ್ರೈವ್ ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಬಹಿರಂಗವಾದ ಬಳಿಕ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡಿ ಎಂದು ಲಕ್ಷ್ಮಣ್ ಸವದಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿಯೇ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಆಗಿದೆ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದೆ ಮಾತನಾಡುವುದು ಹಾಸ್ಯಾಸ್ಪದ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಆರೋಪಕ್ಕೆ ತಿರುಗೇಟು ನೀಡಿದರು.
ಯಾವುದೇ ಪಕ್ಷದ ಸರಕಾರ ಇರಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸ್ವತಃ ಸರಕಾರವೇ ಅನುದಾನ ಮಂಜೂರು ಮಾಡುತ್ತದೆ. ಅದು ಸಾರ್ವಜನಿಕರ ದುಡ್ಡು ಯಾವುದೇ ಖಾಸಗಿಯ ವ್ಯಕ್ತಿಯಿಂದ ಬಂದದ್ದಲ್ಲ. ನಾನು ಕೆಳಮಟ್ಟದ ರಾಜಕಾರಣ ಮಾಡುವ ವ್ಯಕ್ತಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.