ಸಿದ್ದಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಸಾವು | JANATA NEWS
ತುಮಕೂರು : ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ನಡೆದಿದೆ.
ಸಿದ್ಧಗಂಗಾ ಮಠದಲ್ಲಿ ನೆಲೆಸಿ ಓದುತ್ತಿದ್ದ ರಂಜಿತ್ ಎಂಬಾತನನ್ನು ನೋಡಿಕೊಂಡು ಹೋಗಲು ತಾಯಿ ಲಕ್ಷ್ಮೀ ಬಂದಿದ್ದರು.
ಆತನ ಸ್ನೇಹಿತರೊಂದಿಗೆ ಸಿದ್ಧಗಂಗಾ ಮಠದಲ್ಲಿನ ಗೋ ಕಟ್ಟೆ ಬಳಿಗೆ ತೆರಳಿದ್ದಾರೆ. ರಂಜಿತ್, ಸಹೋದರಿ ಮತ್ತು ಸ್ನೇಹಿತರೆಲ್ಲ ಜೊತೆಯಾಗಿ ಅಲ್ಲಿ ಆಟವಾಡಿ, ಸೆಲ್ಫಿ ತೆಗೆದುಕೊಂಡು ಸ್ಟೇಟಸ್ ಹಾಕಿಕೊಂಡಿದ್ದರು.
ಮಧ್ಯಾಹ್ನ ಊಟದ ಬಳಿಕ ರಂಜಿತ್ ಮತ್ತು ಸ್ನೇಹಿತರಾದ ಶಂಕರ್, ಹರ್ಷಿತ್, ರಂಜಿತ್ ತಾಯಿ ಲಕ್ಷ್ಮೀ ಹಾಗೂ ಸಹೋದರಿ ಎಲ್ಲರೂ ಸಿದ್ಧಗಂಗಾ ಮಠದ ಗೋ ಕಟ್ಟೆ ಬಳಿ ಜೊತೆಗೇ ಊಟ ಮಾಡಿದ್ದರು. ಊಟದ ಬಳಿಕ ಕೈ ತೊಳೆಯಲು ರಂಜಿತ್ ಗೋ ಕಟ್ಟೆಗೆ ತೆರಳಿದ್ದ. ಆಗ ಆತ ಅಲ್ಲಿ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ. ರಂಜಿತ್ನನ್ನು ರಕ್ಷಿಸಲು ಹರ್ಷಿತ್, ಶಂಕರ್ ನೀರಿಗೆ ಹಾರಿದ್ದರು.
ರಂಜಿತ್ ತಾಯಿ ಲಕ್ಷ್ಮೀ ಹಾಗೂ ಇನ್ನೊಬ್ಬ ಪಾಲಕ ಮಹದೇವಪ್ಪ ಕೂಡ ನೀರಿಗೆ ಧುಮುಕಿದ್ದರು. ಅದೃಷ್ಟವಶಾತ್ ನೀರಿಗೆ ಇಳಿದಿದ್ದ ರಂಜಿತ್ ಎಂಬ ಇನ್ನೊಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.
ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವಿಗೀಡಾದರು. ಸದ್ಯ ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನ ಹೊರ ತೆಗೆದಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.