ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ | JANATA NEWS

ಬೆಂಗಳೂರು : ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎನ್ಇಪಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದುಪಡಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು. "NEP ಅನ್ನು ಸ್ಕ್ರ್ಯಾಪ್ ಮಾಡುವ ಮೊದಲು ಕೆಲವು ಅಗತ್ಯ ಸಿದ್ಧತೆಗಳನ್ನು ಮಾಡಬೇಕಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದಕ್ಕೆ ಸಮಯಾವಕಾಶ ಸಿಕ್ಕಿರಲಿಲ್ಲ.
ಚುನಾವಣೆಯ ನಂತರ ಸರ್ಕಾರ ರಚನೆಯಾದಾಗ, ಶೈಕ್ಷಣಿಕ ವರ್ಷ ಪ್ರಾರಂಭವಾಗಿತ್ತು ಎಂದು ಸಿಎಂ ವಿವರಿಸಿದರು. ಏಕಾಏಕಿ ರದ್ದುಪಡಿಸಿದರೆ ಅದರಿಂದ ವಿದ್ಯಾರ್ಥಿಗಳ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಈ ಶೈಕ್ಷಣಿಕ ವರ್ಷದಲ್ಲಿ ಎನ್ಇಪಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಎನ್ಇಪಿಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಮತ್ತು ಉಪನ್ಯಾಸಕರಿಂದ ತೀವ್ರ ವಿರೋಧವಿದ್ದು, ರಾಜ್ಯದಲ್ಲಿ ಪ್ರಾಯೋಗಿಕವಾಗಿ ಎನ್ಇಪಿ ಜಾರಿಗೊಳಿಸುವ ಮೂಲಕ ಬಿಜೆಪಿ ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಬಲಿಕೊಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಏಕ ಕಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವಿರೋಧವಿದೆ. ಬಿಜೆಪಿ ದೇಶದಲ್ಲಿ ಎಲ್ಲಾ ಕಡೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿ ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ ಎಂದು ಟೀಕಿಸಿದರು.