ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ | JANATA NEWS

ಬೆಂಗಳೂರು : ಬಿಬಿಎಂಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ಬಿಚ್ಚಿಡುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಎಲ್ಲ ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವಿದೆಯೇ?. ಏನು ಬೇಕಾದ್ರೂ ಮಾಡಲಿ. ಅವರ ಹತ್ರ ಏನು ಮಾಹಿತಿಯಿದೆಯೋ ಇಡಲಿ. ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು
ಬಿಬಿಎಂಪಿ ಕರ್ಮಕಾಂಡ ವಿಚಾರವಾಗಿ ಯಾವಾಗ ದಾಖಲೆ ಸಮೇತ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ, ಅದಕ್ಕೆ ಯಾಕಿಷ್ಟು ಆತುರ? ಶುಭ ಘಳಿಗೆ, ಮುಹೂರ್ತ ಎಲ್ಲಾ ಕೂಡಿಬರಲಿ. ಯಾರು ಏನೇನು ಬಿಚ್ಚಿಡುತ್ತಾರೋ ಬಿಚ್ಚಿಟ್ಟು ಮುಗಿಸಲಿ. ನನಗೆ ಅವಸರವೇನಿಲ್ಲ. ಎಲ್ಲರ ಪಿಕ್ಚರ್ ಮುಗಿಯಲಿ. ತನಿಖೆಯ ಅಂಶಗಳು ಕೈ ಸೇರಿದ ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಏನು ಬೇಕಾದರೂ ಮಾಡಲಿ, ಅವರ ಬಳಿ ಇರುವ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಪೆನ್‌ಡ್ರೈವ್ ಮಾಹಿತಿ ಬಹಿರಂಗಪಡಿಸಿದರೆ ಸಿಒಡಿ ತನಿಖೆ ಮಾಡಿಸಿ ತಮ್ಮ ಪರ ವರದಿ ಮಾಡಿಸಿಕೊಳ್ಳುತ್ತಾರೆಂಬ ಕುಮಾರಸ್ವಾಮಿಯವರು ಮಾಡಿರುವ ಆರೋಪದ ಬಗ್ಗೆ ಉತ್ತರಿಸಿ, ನಮಗೆ ಅವರಷ್ಟು ಅನುಭವವಿಲ್ಲ. ಈಗ ಅವರನ್ನು ಅಣ್ಣ ಎಂದು ಕರೆಯುವಂತಿಲ್ಲ. ಮುಂದಿನ ಜನ್ಮದ ಬಗ್ಗೆ ಬೇರೆ ಮಾತಾಡಿದ್ದಾರೆ. ಇರಲಿ, ಎಲ್ಲಾ ಪಕ್ಷಗಳಿಗೂ ಬಿಚ್ಚಿಡುವುದಕ್ಕೆ ಅವಕಾಶವಿದೆ ಎಂದರು.
ಶಾಸಕರ ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿ, "ನನ್ನ ಹತ್ತಿರ ಯಾರೂ ಏನೂ ಮಾತನಾಡಿಲ್ಲ. ಅವರವರ ರಾಜಕೀಯ ಜೀವನದ ಬಗ್ಗೆ ಅವರವರೇ ತೀರ್ಮಾನಿಸುತ್ತಾರೆ. ಅವರವರ ಬದುಕಿನ ಬಗ್ಗೆ ಅವರವರ ಭವಿಷ್ಯದ ಬಗ್ಗೆ ಅವರವರದ್ದೇ ತೀರ್ಮಾನ. ನನ್ನ ಹತ್ತಿರ ಯಾರೂ ಚರ್ಚಿಸಿಲ್ಲ. ಹಿಂದೆ ಟಾರ್ಗೆಟ್ ಮಿಸ್ ಆದ ಬಗ್ಗೆ ಮುಂದೆ ಮಾತನಾಡುತ್ತೇನೆ. ಬೂತ್ಗಳಲ್ಲಿ ಓಟ್ ಶೇರಿಂಗ್ ಜಾಸ್ತಿ ಆಗಬೇಕಿದೆ. ಸಚಿವನಾಗಿ ನಾನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು" ಎಂದರು.