ನಮಗೂ ಚೆಸ್ ಆಡೋದಕ್ಕೆ ಬರುತ್ತದೆ, ನಾವು ಹೊಡೆದ್ರೆ ರಾಜನಿಗೇ ಹೊಡೆಯುತ್ತೇವೆ! | JANATA NEWS

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಸದ್ದು ಗದ್ದಲ ಜೋರಾಗಿದ್ದು, ಕಾಂಗ್ರೆಸ್ ಸರಕಾರವು ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕೆಂದು ನಮಗೂ ಗೊತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಅವರು ಎಚ್ಚರಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಮಾತನಾಡಿದ ಅವರು, ಎಸ್.ಟಿ. ಸೋಮಶೇಖರ್ ಅವರು ಹಿರಿಯ, ಅನುಭವಿ ಶಾಸಕರು. ಇತ್ತೀಚೆಗೆ ಕೇಳಿ ಬರುತ್ತಿರುವ ಊಹಾಪೋಹಾಗಳ ಬಗ್ಗೆ ಚರ್ಚಿಸಿದ್ದಾರೆ. ಅವರ ಬೆಂಬಲಿಗರನ್ನು ಕಾಂಗ್ರೆಸ್‌ನವರು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ, ಸಚಿವರೂ ಆಗಿ, ಇದೀಗ ಅತೃಪ್ತಗೊಂಡಿರುವ ಕೆಲ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎನ್ನಲಾಗಿದೆ. ಹೀಗಾಗಿ ಆಪರೇಷನ್ ಹಸ್ತದ ಭಯ ಬಿಜೆಪಿ ನಾಯಕರನ್ನು ಕಾಡುತ್ತಿದೆ. ನಮಗೂ ಚೆಸ್ ಆಡೋದಕ್ಕೆ ಬರುತ್ತದೆ. ನಾವು ಹೊಡೆದ್ರೆ ರಾಜನಿಗೇ ಹೊಡೆಯುತ್ತೇವೆ ಅಂತ ಸಿಟಿ ರವಿ ವಾರ್ನಿಂಗ್ ಮಾಡಿದ್ದಾರೆ.
ನಮಗೆ ಹಿಂದೆ 104 ಸೀಟು ಬಂದಿದ್ದ ಹಿನ್ನಲೆ ಯಾರಿಗೂ ಬಹುಮತ ಇರಲಿಲ್ಲ. ಈ ಕಾರಣಕ್ಕೆ ಅಂದು ಕಾಂಗ್ರೆಸ್, ಜೆಡಿಎಸ್ ಸೇರಿ ಸರಕಾರ ನಡೆಸಿದ್ದವು. 3 ತಿಂಗಳಿಗೆ ನಿಮ್ಮದು ಅಧ್ವಾನ ಆಗಿ, ಒಬ್ಬರಿಗೆ ಒಬ್ಬರನ್ನು ಕಂಡರೆ ಆಗದ ಸ್ಥಿತಿ ಇತ್ತು. ಅದರ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಹೀನಾಯವಾಗಿ ಸೋತಿದ್ದವು ಎಂದರು.
ಅನಿಶ್ಚಿತತೆ, ಅರಾಜಕೀಯ ಪರಿಸ್ಥಿತಿ ಬಂದಾಗ ಶಾಸಕರಿಗೆ ಬಿಜೆಪಿಯೇ ಪರ್ಯಾಯ ಎನಿಸಿತ್ತು. ಈಗ ಪೂರ್ಣ ಬಹುಮತ ಇದೆ. ಅತಿಯಾಗಿ ಮಾಡಲು ಹೋದರೆ ಪರಿಸ್ಥಿತಿ ಕೆಟ್ಟದ್ದಾಗಲಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಒಳ್ಳೆಯ ಆಡಳಿತ ನಡೆಸುವ ಗುರಿ ಇಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಇಲ್ಲದೇ ಇರುವುದನ್ನು ಮಾಡಲು ಹೊರಟರೆ ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಅವರ ಹಿರಿಯ ಸಚಿವರು, ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಅವರಿಗೆ ಆಗ್ತಿಲ್ಲ. ಅವರು ಅತಿರೇಕಕ್ಕೆ ಕೈ ಹಾಕಿದರೆ ನಮಗೆ ಮುಂದೆ ಏನ್ ಮಾಡ್ಬೇಕು ಅಂತ ಗೊತ್ತು. ಚೆಸ್ ಆಟ ಏಕಮುಖ ಅಲ್ಲ. ನಮಗೆ ಚೆಕ್ ಮೇಟ್ ಕೊಡಲು ಬಂದ್ರೆ, ನಮಗೂ ಚೆಕ್ ಮೇಟ್ ಕೊಡಲು ಗೊತ್ತು. ನಾವು ಚೆಕ್ ಮೇಟ್ ಮಾಡಿದ್ರೆ ಸಣ್ಣಪುಟ್ಟ ಸೈನಿಕರಿಗೆ ಮಾಡಲ್ಲ. ನೇರ ರಾಜನಿಗೇ ಚೆಕ್ ಮೇಟ್ ಮಾಡ್ತೀವಿ ಎಂದು ಮಾರ್ಮಿಕವಾಗಿ ಮಾತನಾಡಿದರು.