ಅಗ್ನಿ ಅನಾಹುತದಲ್ಲಿ ನಿಧನರಾದ ಮುಖ್ಯ ಅಭಿಯಂತರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣಕಾಸು ನೆರವು, ಸಂತಾಪ : ಮುಖ್ಯ ಆಯುಕ್ತರು | JANATA NEWS

ಬೆಂಗಳೂರು : ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಅಭಿಯಂತರರಾಗಿದ್ದ ಸಿ.ಎಂ ಶಿವಕುಮಾರ್ ಅವರ ನಿಧನದ ಸ್ಮರಣಾರ್ಥ ಇಂದು ಸಂತಾಪ ಸೂಚಿಸಲಾಯಿತೆಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಮುಖ್ಯ ಅಭಿಯಂತರರಾಗಿದ್ದ ಸಿ.ಎಂ ಶಿವಕುಮಾರ್ ಅವರ ನಿಧನದ ಸ್ಮರಣಾರ್ಥ ಏರ್ಪಡಿಸಿದ್ದ ಶದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ್ ರವರ ನಿಧನದ ಹಿನ್ನೆಲೆ ಮಾನ್ಯ ಉಪ ಮುಖ್ಯಮಂತ್ರಿ ರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದು, ಅದರಂತೆ ಕೂಡಲೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದೆಂದು ಹೇಳಿದರು.
ಪಾಲಿಕೆಯ ಇತಿಹಾಸದಲ್ಲಿ ಇಂತಹ ಘಟಣೆ ನಡೆದಿಲ್ಲ. ಇದು ತುಂಬಾ ಶೋಚನೀಯ ವಿಷಯವಾಗಿದ್ದು, ಅತ್ಯಂತ ನೋವು ತರುವಂತಹ ವಿಚಾರವಾಗಿದೆ. ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲಾ ಅಗಲಿದ್ದಾರೆ. ಇಲ್ಲಿ ಕೆಲಸ ಮಾಡುವ ಅಧಿಕಾರಿ/ಸಿಬ್ಬಂದಿಗಳು ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿರುತ್ತಾರೆ. ಸಂದರ್ಭಕ್ಕನುಗುಣವಾಗಿ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಶಿವಕುಮಾರ್ ಅಗ್ನಿ ಅವಘಡದ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಸ್ಥಳದಲ್ಲಿದ್ದ ಅಧಿಕಾರಿ/ಸಿಬ್ಬಂದಿಯನ್ನು ಕಾಪಾಡಲು ಮುಂದಾಗಿ, ಕೊನೆಯದಾಗಿ ಅವರು ಹೊರ ಬಂದಿದ್ದಾರೆ. ಅವರಿದ್ದ ಸ್ಥಾನದ ಜವಾಬ್ದಾರಿಯನ್ನು ಅರಿತು ನಾಯಕನ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಶಿವಕುಮಾರ್ ರವರ ಮಕ್ಕಳ ವಿದ್ಯಾಭ್ಯಾಸದ ನೆರವಿಗಾಗಿ 95.5 ಲಕ್ಷ ರೂ. ಮೊತ್ತ ಹಣಕಾಸು ನೆರವು:
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ದರ್ಜೆಯ ನೌಕರರ ವೇತನದಲ್ಲಿ ಹಣವನ್ನು ಕಟಾವು ಮಾಡಿ ಸುಮಾರು 95.5 ಲಕ್ಷ ರೂ. ಹಣವನ್ನು ಶಿವಕುಮಾರ್ ರವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುಖ್ಯ ಆಯುಕ್ತರ ಸಮ್ಮುಖದಲ್ಲಿ ಅತಿ ಶೀಘ್ರದಲ್ಲಿ ಚೆಕ್ ಅನ್ನು ಹಸ್ತಾಂತರ ಮಾಡಲಾಗುವುದೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ರವರು ತಿಳಿಸಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ ದರ್ಜೆ ಶ್ರೇಣಿಯ ಅಧಿಕಾರಿಗಳಿಂದ 3,000 ರೂ., ಬಿ ದರ್ಜೆ ಶ್ರೇಣಿಯ ನೌಕರರಿಂದ 2,000 ರೂ., ಸಿ ದರ್ಜೆ ಶ್ರೇಣಿಯ ನೌಕರರಿಂದ 1,500 ರೂ. ಹಾಗೂ ಡಿ ದರ್ಜೆ ಶ್ರೇಣಿಯ ನೌಕರರಿಂದ 1,000 ರೂ. ಮೊತ್ತವನ್ನು ವೇತನದಲ್ಲಿ ಕಟಾವು ಮಾಡಿ ಸುಮಾರು 95.5 ಲಕ್ಷ ರೂ. ಹಣವನ್ನು ಶಿವಕುಮಾರ್ ರವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುಖ್ಯ ಆಯುಕ್ತರ ಸಮ್ಮುಖದಲ್ಲಿ ಚೆಕ್ ಅನ್ನು ಹಸ್ತಾತರಿಸಲಾಗುವುದೆಂದು ತಿಳಿಸಿದರು.
ಮುಂದುವರಿದು, ಶಿವಕುಮಾರ್ ರವರ ಸವಿನೆನಪಿಗಾಗಿ ಎಲ್ಲಾ ರೀತಿಯ ಸೌಲಭ್ಯವುಳ್ಳ 2 ಆಂಬ್ಯುಲೆನ್ಸ್ ಗಳನ್ನು ಬಿಬಿಎಂಪಿ ನೌಕರರ ಸಹಕಾರ ಸಂಘ ಹಾಗೂ ಬಿಬಿಎಂಪಿ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎರಡು ತಿಂಗಳಲ್ಲಿ ಪಾಲಿಕೆಗೆ ಉಚಿತವಾಗಿ ಹಸ್ತಾಂತರಿಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ರವರು ತಿಳಿಸಿದರು.