ಕುಮಾರಸ್ವಾಮಿ ಆರೋಗ್ಯ ಚೇತರಿಕೆ, ಮೈಲ್ಡ್ ಸ್ಟ್ರೋಕ್ ಆಗಿತ್ತು, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದಕ್ಕೆ ಹೆಚ್ಚಿನ ಅಪಾಯ ಸಂಭವಿಸಿಲ್ಲ! | JANATA NEWS
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯು.ಟಿ.ಖಾದರ್, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು, ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು. ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ನಂತೆ ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವೈದ್ಯಕೀಯ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆಂದು ತಿಳಿಸಿದೆ.
ಗೃಹ ಸಚಿವ ಪರಮೇಶ್ವರ್, ಬಿಜೆಪಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಇಂದು ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಪರಮೇಶ್ವರ್ ಅವರು, ಕುಮಾರಸ್ವಾಮಿ ಅವರಿಗೆ ನಾಲ್ಕೈದು ದಿನಗಳ ಹಿಂದೆ ಒಂದು ಮೈಲ್ಡ್ ಸ್ಟ್ರೋಕ್ ಆಗಿತ್ತು. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ ಅಂತ ಹೇಳಿದ್ದಾರೆ. ಅವರು ಅದೃಷ್ಟ ಸಹ ಚೆನ್ನಾಗಿ ಇತ್ತು ಅನಿಸುತ್ತೆ, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದಿದ್ದಾರೆ. ಸೂಕ್ತ ಚಿಕಿತ್ಸೆಯೂ ಸಿಕ್ಕಿದ್ದು, ಹಾಗಾಗಿ ಹೆಚ್ಚಿನ ಡ್ಯಾಮೇಜ್ ಆಗಿಲ್ಲ ಎಂದು ಹೇಳಿದರು. ಅವರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ತನ್ನೊಂದಿಗೆ ಮಾತಾಡಿದರು ಎಂದು ಪರಮೇಶ್ವರ್ ಹೇಳಿದರು.
ಇದೇ ವೇಳೆ ಆದಿತ್ಯ ೧ ಯಶಸ್ವಿ ಲಾಂಚ್ ಕುರಿತಂತೆ ಮಾತನಾಡಿದ ಪರಮೇಶ್ವರ್, ಇಸ್ರೋ ಪ್ರಪಂಚದಲ್ಲೇ ನಾಲ್ಕನೇಯ ಸ್ಥಾನ ಪಡೆದುಕೊಂಡಿದೆ. ಚಂದ್ರಯಾನ -3 ರೋವರ್ ಚಂದ್ರನಲ್ಲೇ ಇದೆ, ಇದು ವೈಜ್ಞಾನಿಕವಾಗಿ ಚಂದ್ರನ ಮೇಲೆ ಸಂಶೋಧನೆ ಮಾಡ್ತಿದೆ. ಚಂದ್ರನ ಮೇಲೆ ಸಲ್ಪರ್, ಕಾಪರ್ ಇರೋ ಬಗ್ಗೆ ಮಾಹಿತಿ ಕೊಟ್ಟಿದೆ. ಹೆಚ್ಚಿನ ಮಾಹಿತಿ ಡಾಟಾ ಅನಾಲಿಸಿಸ್ ಮಾಡಿದ ಮೇಲೆ ಸಿಗುತ್ತೆ. ಇದೀಗ ಸೂರ್ಯನ ಹತ್ತಿರ ಹೋಗಿ ಸಂಶೋಧನೆ ಮಾಡಲು ಸಿದ್ಧತೆಯಾಗಿದೆ. ಸೂರ್ಯನ ಕಿರಣಗಳು ಅದರಿಂದ ಬರೋ ಶಕ್ತಿ ಬಗ್ಗೆ ಸೂರ್ಯಯಾನ ಕೈಗೊಂಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.