ಮತ್ತೆ ಆಪರೇಷನ್ ಕಮಲ ಫಿಕ್ಸ್, ಬೇಕಿದ್ದರೆ ಕಾದು ನೋಡಲಿ: ಕೆ.ಎಸ್. ಈಶ್ವರಪ್ಪ | JANATA NEWS

ಶಿವಮೊಗ್ಗ : 2024ರ ಲೋಕಸಭೆ ಚುನಾವಣೆಗೆ ಮುನ್ನ ಅಥವಾ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಲೋಕಸಭೆ ಚುನಾವಣೆಗೂ ಮುನ್ನ ಅಥವಾ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೇಜವಾಬ್ದಾರಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಸಂತೋಷ್ ಹೇಳಿಕೆಗೆ ಪುಷ್ಟಿ ನೀಡುವ ಹಲವು ಬೆಳವಣಿಗೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಸಮನ್ವಯತೆ ಇಲ್ಲ. ಅನೇಕ ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರದ ಬಗ್ಗೆ ಅತೃಪ್ತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲೇ ಅಂದು 17 ಜನ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆಗ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಲಿ ಎಂದು ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಮಗೆ ತಾಕತ್ ಇರೋದಕ್ಕೆ ಸರ್ಕಾರ ಬೀಳಿಸಿ ತೋರಿಸಿದ್ದು. ಈಗ ಸಹ ಕಾದು ನೋಡಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ಕಾಂಗ್ರಸ್ಗೆ ಅವರ ಶಾಸಕರ ಮೇಲೆ ನಂಬಿಕೆ ಇರದ ಕಾರಣ ಅಂದು ಸರ್ಕಾರ ಬಿದ್ದಿತ್ತು ಎಂದರು.
ಈಗ ಸರ್ಕಾರ ಬಂದು ಮೂರು ತಿಂಗಳಾಗಿದೆ. ಈಗಲೇ ಅಸಮಾಧಾನ ಶುರುವಾಗಿದೆ. ಪ್ರಿಯಾಂಕ್ ಖರ್ಗೆ ಲೋಕಸಭೆ ಚುನಾವಣೆವರೆಗೂ ಕಾಯಲಿ. ನೂರಕ್ಕೆ ನೂರು ಆಪರೇಷನ್ ಕಮಲ ಆಗುತ್ತದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ನೂರಕ್ಕೆ ನೂರರಷ್ಟು ಆಪರೇಷನ್ ಕಮಲ ಆಗುತ್ತದೆ. ಈ ದೇಶದಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಹೀಗಾಗಿ ಎಲ್ಲಾ ನಾಯಕರು ಬಿಜೆಪಿಗೆ ಬರುತ್ತಾರೆ ಎಂದು ತಿಳಿಸಿದರು.