ನಾನು ರಾತ್ರಿ 2 ಗಂಟೆಗೆ ಆ ನಿರ್ಧಾರ ಕೈಗೊಳ್ಳದೇ ಹೋಗಿದ್ದರೇ ಜೀವನ ಪೂರ್ತಿ ಹಾಸಿಗೆಯಲ್ಲೇ ಇರಬೇಕಾಗಿತ್ತು! | JANATA NEWS
ಬೆಂಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿಯವರು ಇದೀಗ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ತಮಗೆ ಚಿಕಿತ್ಸೆ ನೀಡಿದ್ದ ವೈದ್ಯರೊಂದಿಗೆ ಹೆಚ್‌ಡಿಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ರಾತ್ರಿ 2 ಗಂಟೆಗೆ ಆ ನಿರ್ಧಾರ ಕೈಗೊಳ್ಳದೇ ಹೋಗಿದ್ದರೇ ಜೀವನ ಪೂರ್ತಿ ಹಾಸಿಗೆಯಲ್ಲೇ ಇರಬೇಕಾಗಿತ್ತು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ಕಳೆದ 5 ದಿನದಿಂದ ಸ್ನೇಹಿತರು ಆಘಾತದಲ್ಲಿ, ಭಯದ ವಾತಾವರಣದಲ್ಲಿ ಇದ್ದರು. ಮೊದಲಿಗೆ ಭಗವಂತನಿಗೆ, ಜನ್ಮ ಕೊಟ್ಟ ತಂದೆತಾಯಿಗೆ ನಮಿಸುತ್ತೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ. ಇಂದು ರಾಜಕೀಯ ಹೊರತುಪಡಿಸಿ ಮಾತಾಡ್ತೀನಿ , ಮುಂದಿನ ತಿಂಗಳು ರಾಜಕೀಯದ ಬಗ್ಗೆ ಮಾತನಾಡೋಣ ಎಂದರು.
ಆ ದಿನ ನಾನು ಬಿಡದಿಯ ನನ್ನ ತೋಟದ ಮನೆಯಲ್ಲಿದ್ದೆ. ನನ್ನ ಆಪ್ತ ಸಹಾಯಕ ಸತೀಶ್ ಜತೆಯಲ್ಲಿ ಇದ್ದರು. ತಡರಾತ್ರಿ 2 ಗಂಟೆಯ ಹಾಗೆ ನನ್ನ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿತು. ತಕ್ಷಣವೇ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಕರೆ ಮಾಡಿ, ಅವರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಸತೀಶ್ ಚಂದ್ರ ಅವರನ್ನು ಸಂಪರ್ಕ ಮಾಡಲಾಯಿತು.
ಬಿಡದಿ ತೋಟದ ಮನೆಯಿಂದ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಇಲ್ಲಿಗೆ ತಲುಪಿದೆ. ಆಸ್ಪತ್ರೆಗೆ ಬಂದ ತಕ್ಷಣವೇ ವೈದ್ಯರು ಚಿಕಿತ್ಸೆ ಶುರು ಮಾಡಿದರು. ಹೀಗಾಗಿ ನಾನು ಈಗ ಬದುಕಿ ನಿಮ್ಮ ಮುಂದೆ ಇರುವಂತೆ ಆಗಿದೆ. ನಾನು ರಾತ್ರಿ 2 ಗಂಟೆಗೆ ಆ ನಿರ್ಧಾರ ಕೈಗೊಳ್ಳದೇ ಹೋಗಿದ್ದರೇ ಜೀವನ ಪೂರ್ತಿ ಹಾಸಿಗೆಯಲ್ಲೇ ಇರಬೇಕಾಗಿತ್ತು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ಬಡವ ಆಗಲಿ, ಶ್ರೀಮಂತ ಆಗಲಿ ಪಾರ್ಶ್ವವಾಯು ಆದ ತಕ್ಷಣ ಆಸ್ಪತ್ರೆಗೆ ಬರಬೇಕು. ಬೆಳಗ್ಗೆ ನೋಡೋಣ ಎಂದು ಸಮಯ ತಳ್ಳಬಾರದು. ಗೋಲ್ಡನ್ ಅವರ್ನಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ನನಗೆ ಇದು ಮೂರನೇ ಜನ್ಮ, 60 ವರ್ಷದಲ್ಲಿ ಇದು ನನಗೆ 3 ನೇ ಜನ್ಮವಾಗಿದೆ. ಇಂದು ನಾನು ಉಳಿದಿದ್ರೆ, ಅದು ವೈದ್ಯರಿಂದ. ಅವತ್ತು ನಾನು ಬೆಳಗ್ಗೆ ಆಸ್ಪತ್ರೆಗೆ ಹೋಗೋಣ ಎಂದು ಸುಮ್ಮನಿದಿದ್ರೆ ಇಂದು ಇಷ್ಟು ಸರಾಗವಾಗಿ ನಿಮ್ಮ ಮುಂದೆ ಮಾತನಾಡಲು ಆಗ್ತಿರಲಿಲ್ಲ ಎಂದು ಹೇಳಿದ್ದಾರೆ.
ಇವತ್ತು ಚಂದ್ರಯಾನ, ಸೂರ್ಯಯಾನ ಮಾಡಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ನುರಿತ, ಪ್ರತಿಭಾವಂತ, ಶ್ರೇಷ್ಠ ವೈದ್ಯರು ಇದ್ದಾರೆ. ಎಲ್ಲರೂ ಜಾಗೃತರಾಗಿ ಇರಬೇಕು ಎಂಬುದು ನನ್ನ ಮನವಿ, ಇನ್ನು ಮುಂದೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.