ರಿಯಲ್ ಎಸ್ಟೇಟ್ ಬಿಲ್ಡರುಗಳಿಂದ ಈ ಸರಕಾರದ ಪ್ರಭಾವಿಗಳು 2,000 ರೂಪಾಯಿ ಸುಲಿಗೆ | JANATA NEWS
ಬೆಂಗಳೂರು : ರಿಯಲ್ ಎಸ್ಟೇಟ್ ಬಿಲ್ಡರುಗಳಿಂದ ಈ ಸರಕಾರದ ಪ್ರಭಾವಿಗಳು 2,000 ಕೋಟಿ ರೂಪಾಯಿ ಸುಲಿಗೆ ಮಾಡಲು ಹೊರಟಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ದೊಡ್ಡ ಬಿಲ್ಡರುಗಳ ಸಭೆ ಮಾಡಿರುವ ಪ್ರಭಾವಿಗಳು, ಲೋಕಸಭೆ ಚುನಾವಣೆಯ ನೆಪ ಇಟ್ಟುಕೊಂಡು ಬಿಲ್ಡರುಗಳಿಂದ ಪ್ರತೀ ಚದರ ಅಡಿಗೆ 100 ರೂಪಾಯಿ ಲೆಕ್ಕದಲ್ಲಿ ವಸೂಲಿಗೆ ಇಳಿದಿದ್ದಾರೆ. ಆ ಮೂಲಕ ಭರ್ತಿ 2,000 ಕೋಟಿ ರೂಪಾಯಿ ಸಂಗ್ರಹಕ್ಕೆ ಗುರಿ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಹೆಸರಿಗೆ ʼಇಂಡಿಯಾʼ ಎಂದು ಕೂಟ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ನಾಮಕರಣ ಮಾಡಿಕೊಂಡರು. ಈಗ ಅದೇ ʼಇಂಡಿಯಾʼ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಟಿದ್ದಾರೆ. ಬಿಲ್ಡರುಗಳ ಸಭೆ ನಡೆಸಿ ಇಷ್ಟಿಷ್ಟು ಕಪ್ಪ ಒಪ್ಪಿಸಲೇಬೇಕು ಎಂದು ಡಿಮಾಂಡ್ ಮಾಡಿದ್ದಾರೆ. ಅವರಿಗೆ ಜನರು ಪೆನ್ನು ಪೇಪರ್ ಕೊಟ್ಟಿದ್ದು ಈ ರೀತಿ ಸುಲಿಗೆ ಮಾಡಲಿಕ್ಕಾಗಿಯೇ ಎಂದು ಯಾರ ಹೆಸರನ್ನೂ ಹೇಳದೇ ದೂರಿದರು ಮಾಜಿ ಮುಖ್ಯಮಂತ್ರಿಗಳು.
ಬೆಂಗಳೂರು-ಮೈಸೂರು ಮೂಲಭೂತ ಕಾರಿಡಾರ್ ಯೋಜನೆ (ನೈಸ್ ರಸ್ತೆ) ಬಹುಕೋಟಿ ರೂಪಾಯಿಗಳ ಅತಿದೊಡ್ಡ ಹಗರಣವಾಗಿದ್ದು, ಸುಮಾರು 2-3 ಲಕ್ಷ ಕೋಟಿ ರೂ. ಮೌಲ್ಯದ ಭೂಮಿಯನ್ನು ಪಟ್ಟಭದ್ರರು ನುಂಗಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.