ಭಾರತ ಮಂಟಪದಲ್ಲಿ ಮಳೆನೀರಿನಿಂದ ಮುಳುಗಡೆ ಕಾಂಗ್ರೆಸ್ ಆರೋಪ ಸುಳ್ಳು ಎಂದ ಪಿಐಬಿ | JANATA NEWS

ನವದೆಹಲಿ : ಜಿ20 ಶೃಂಗಸಭೆಯ ಕೊನೆಯದಿನ ದೆಹಲಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಭೆ ನಡೆಯುತ್ತಿರುವ ಸ್ಥಳವಾದ ಭಾರತ ಮಂಟಪ ಕಟ್ಟಡ ಮಳೆನೀರಿನಿಂದ ಮುಳುಗಡೆಯಾಗಿದೆ, ಎಂದು ವಿಡಿಯೋ ಒಂದನ್ನು ಷೇರ್ ಮಾಡಿದ್ದ ಕಾಂಗ್ರೆಸ್, ಕೋಟ್ಯಂತ ರು. ಖರ್ಚು ಮಾಡಿ ನಿರ್ಮಾಣ ಮಾಡಿದ್ದರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಭಾನುವಾರ ಆರೋಪಿಸಿತ್ತು. ಆದರೆ ಇದನ್ನು ಅಲ್ಲಗಳೆದಿರುವ ಪಿಐಬಿ ಫ್ಯಾಕ್ಟ್ ಚೆಕ್ ಯುನಿಟ್ ಭಾರತ ಮಂಟಪ ಕಟ್ಟಡ ಮಳೆನೀರಿನಿಂದ ನೀರು ತುಂಬಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ ಮಂಟಪದಲ್ಲಿ ನೀರು ತುಂಬಿಕೊಂಡಿರುವ ವಿಡಿಯೋಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್, ಇದು ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಪೊಳ್ಳು ಅಭಿವೃದ್ಧಿ ಬಹಿರಂಗವಾಗಿದೆ. ಜಿ20ಗಾಗಿ ಭಾರತ ಮಂಟಪವನ್ನು 2,700 ಕೋಟಿ ರು. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ ಇದು ಒಂದೇ ಮಳೆಗೆ ಹೀಗಾಗಿದೆ ಎಂದು ಹೇಳಿದೆ.
ಪ್ರೆಸ್ ಬ್ಯೂರೋ ಆಫ್ ಇಂಡಿಯಾ(ಪಿಐಬಿ) ಈ ವಿಡಿಯೋಗಳನ್ನು ಫ್ಯಾಕ್ಟ್ ಚೆಕ್ ಮಾಡಿದ್ದು, ಇದು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಾರತ ಮಂಟಪದಲ್ಲಿ ನೀರು ಹರಿಯುತ್ತಿತ್ತು. ಇದನ್ನು ಮೋಟರ್ ಬಳಸಿ ಖಾಲಿ ಮಾಡಲಾಗಿದೆ. ಈ ಪ್ರದೇಶ ಮುಳುಗಡೆಯಾಗಿಲ್ಲ ಎಂದು ಹೇಳಿದೆ.