ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ: ಚೈತ್ರಾ ಕುಂದಾಪುರ ಸೇರಿ ಐವರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ವಶಕ್ಕೆ | JANATA NEWS

ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ಆದೇಶಿಸಲಾಗಿದೆ.
ಪ್ರಕರಣ ಪ್ರಮುಖ ಆರೋಪಿತೆಯಾಗಿರುವ ಚೈತ್ರಾ ಕುಂದಾಪುರ, ರಮೇಶ್, ದೇವರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿ ಇಂದು ನಗರದ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆತಂದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಿದರು. ಆರೋಪಿಗಳ ವಿರುದ್ಧ 5 ಕೋಟಿಗೂ ಹೆಚ್ಚು ಹಣ ವಂಚನೆ ಇದ್ದು, ಕೃತ್ಯ ಎಸಗಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು.
ಈ ವೇಳೆ ಆರೋಪಿಗಳನ್ನು 14 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಆದರೆ ಕೋರ್ಟ್ ಆರು ಮಂದಿ ಆರೋಪಿಗಳಿಗೂ 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ.
ಉಡುಪಿಯ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಹಣವನ್ನು ಪಡೆದಿದ್ದಾರೆ. ಹಂತ ಹಂತವಾಗಿ ಅವರಿಗೆ ವಿವಿಧ ಮಾರ್ಗದಲ್ಲಿ ವಂಚನೆ ಮಾಡಿ ದಿಕ್ಕು ತಪ್ಪಿಸಿದ್ದಾರೆ. ನಂತರ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಮೋಸ ಹೋಗಿರುವ ಬಗ್ಗೆ ಅರಿವಾಗಿ ಉದ್ಯಮಿ ದೂರು ಕೊಟ್ಟಿದ್ದರು. ಈ ವಂಚನೆ ಜಾಲದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು 10 ಜನರು ಭಾಗಿಯಾಗಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ನಿನ್ನೆ ರಾತ್ರಿ ವೇಳೆ ಉಡುಪಿಯ ಶ್ರೀಕೃಷ್ಣ ಮಠದ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿತ್ತು.