10 ತಿಂಗಳ ಮಗುವನ್ನು ಬಿಟ್ಟು ನೇಣಿಗೆ ಶರಣಾದ ತಾಯಿ | JANATA NEWS
ಯಾದಗಿರಿ : ಗೃಹಿಣಿಯೊಬ್ಬಳು 10 ತಿಂಗಳ ಮಗುವನ್ನ ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸೌಂದರ್ಯ ಮಠಪತಿ (25) ಎಂದು ಗುರುತಿಸಲಾಗಿದೆ. ಗಂಡನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಹೆರಿಗೆಯಾದ ನಂತರ ತನ್ನ 6 ತಿಂಗಳವರೆಗೆ ಚೆನ್ನಾಗಿಯೇ ಇದ್ದಳು. ಆದರೆ, ಹೆರಿಗೆಯ ಬಾಣಂತನವನ್ನು ಮುಗಿಸಿಕೊಂಡು ಗಂಡನ ಮನೆಗೆ ಬಂದಿದ್ದ ಮೃತೆ ಸೌಂದರ್ಯ ತನ್ನ ಮನಸ್ಸು ಸರಿಯಾಗಿಲ್ಲವೆಂದು ಇತ್ತೀಚೆಗೆ ತನ್ನ 10 ತಿಂಗಳ ಮಗುವನ್ನು ಕೊಂಕಲ್ ಗ್ರಾಮದ ತವರು ಮನೆಯಲ್ಲಿ ಬಿಟ್ಟು ಬಂದಿದ್ದಳು.
ಕೊಂಗಂಡಿ ಗ್ರಾಮದ ಗಂಡನ ಮನೆಯಲ್ಲಿ ಮಾವ, ಗಂಡನೊಂದಿಗೆ ವಾಸವಾಗಿದ್ದ ಸೌಂದರ್ಯ, ಎಂದಿನಂತೆ ಸಹಜವಾಗಿ ಇರಲಿಲ್ಲ. ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಸದ್ಯ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .