ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಿಎಂ ಸೂಚನೆ | JANATA NEWS

ಬೆಂಗಳೂರು : ಕಳ್ಳಭಟ್ಟಿಗೆ ಕಡಿವಾಣ ಹಾಕಿ, ಅಕ್ರಮ ಮದ್ಯ ನುಸುಳುವಿಕೆ ತಪ್ಪಿಸಿ, ಬಾಕಿ ತೆರಿಗೆ ವಸೂಲಿ ಮಾಡಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ. 19.2ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತೆರಿಗೆ ವಂಚನೆ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಹಚ್ಚಿ ತೆರಿಗೆ ಸಂಗ್ರಹ ಗುರಿಯನ್ನು ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಇದನ್ನು ಸಾಧಿಸಿ ತೋರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇಲಾಖೆಯ ಪ್ರಸಕ್ತ ವರ್ಷದ ರಾಜಸ್ವ ಸಂಗ್ರಹ ಗುರಿ 36,000 ಕೋಟಿ ಇದ್ದು, ತೆರಿಗೆ ಸಂಗ್ರಹದ ಬೆಳವಣಿಗೆ ದರ 5.31% ರಷ್ಟಿದೆ. ನಿಗದಿತ ಗುರಿ ಸಾಧನೆಗೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದ ಗಡಿ ಭಾಗಗಳಲ್ಲಿ, ವಿಶೇಷವಾಗಿ ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ಕುರಿತು ಜಾರಿ ದಳದವರು ಹೆಚ್ಚಿನ ನಿಗಾ ವಹಿಸಬೇಕು. ಕಳ್ಳಭಟ್ಟಿ ಮದ್ಯ ತಯಾರಿಕೆ, ಮಾರಾಟದಿಂದ ಬಡವರ ಆದಾಯ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಕಳ್ಳಭಟ್ಟಿ ಮದ್ಯ ತಯಾರಿಕೆ ಮತ್ತು ಮಾರಾಟವನ್ನು ಮಟ್ಟಹಾಕುವಂತೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸೂಚಿಸಿದರು.
ಜೊತೆಗೆ ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟಲು ನಿರ್ದೇಶನ ನೀಡಿದರು. ಗುರಿಗಿಂತ ಹೆಚ್ಚಿನ ಸಾಧನೆಯಾಗಬೇಕು. ಹಿಂದೆ ಉಳಿದವರು ಎಲ್ಲ ಪ್ರಯತ್ನ ಮಾಡಬೇಕು. ಇದಕ್ಕೆ ಜಾಗೃತ ದಳದವರು ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು. ಆ ವೇಳೆಗೆ ಇನ್ನಷ್ಟು ಪ್ರಗತಿಯ ವರದಿ ನೀಡಿ ಎಂದರು.
ತೆರಿಗೆ ಕಳ್ಳತನ ತಡೆಯುವುದಕ್ಕಾಗಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಪ್ರಯತ್ನದಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಬರಲು ಸಾಧ್ಯ. ಅನೇಕ ಭಾಗಗಳಲ್ಲಿ ಅನೇಕ ಉತ್ಪನ್ನಗಳಲ್ಲಿ ತೆರಿಗೆ ವಂಚನೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ತೆರಿಗೆ ಸಂಗ್ರಹಿಸಬೇಕು. ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಸಾಮೂಹಿಕ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಸೂಚಿಸಿದರು.