ಬೃಹತ್ ನೀರುಗಾಲುವೆಗಳ ಒತ್ತುವರಿ : ಸಾರ್ವಜನಿಕರಿಂದ ಮಾಹಿತಿ ಕೋರಿದ ಬಿಬಿಎಂಪಿ | JANATA NEWS
ಬೆಂಗಳೂರು : ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಒತ್ತುವರಿಗಳನ್ನು/ಅತಿಕ್ರಮಣಗಳನ್ನು ಗುರುತಿಸಲು ಸಾರ್ವಜನಿಕರು ಕೈಜೋಡಿಸುವಂತೆ ಹಾಗೂ ಮಾಹಿತಿಯನ್ನು ಭಾವಚಿತ್ರದೊಂದಿಗೆ ಸಲ್ಲಿಸಲು ಕೋರಲಾಗಿದೆ.
ಘನ ಉಚ್ಛ ನ್ಯಾಯಾಲಯವು WP No. 38401/2014 ದಾವೆಯಲ್ಲಿ ರಾಜಕಾಲುವೆಗಳ ಮೇಲೆ ಹೊಸದಾಗಿ ಒತ್ತುವರಿಗಳು ಇದ್ದಲ್ಲಿ ಅಂತಹ ಒತ್ತುವರಿಗಳನ್ನು ತುರ್ತಾಗಿ ಗುರುತಿಸಿ, ಸದರಿ ಒತ್ತುವರಿಗಳನ್ನು ತೆರವುಗೊಳಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತದೆ.
ಅದರಂತೆ ಕ್ರಮ ಕೈಗೊಳ್ಳಬೇಕಾಗಿದ್ದು, ಇದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು, ಘನ ಸರ್ಕಾರದ ಆದೇಶ ಸಂಖ್ಯೆ: ನಅಇ 250 ಎಂಎನ್‌ವೈ 2018(ಭಾಗ-3), ಬೆಂಗಳೂರು ದಿನಾಂಕ:28.08.2023(1) ರಂತೆ ರಾಜಕಾಲುವೆಗಳ ಮೇಲೆ ಇರುವ ಒತ್ತುವರಿಗಳನ್ನು ಗುರುತಿಸಲು ಬಿಬಿಎಂಪಿ ವತಿಯಿಂದ ಕ್ರಮಕೈಗೊಳ್ಳಲಾಗುತ್ತಿರುತ್ತದೆ.
ಮುಂದುವರಿದು, ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಾಜಕಾಲುವೆಗಳಲ್ಲಿ ಒತ್ತುವರಿಗಳನ್ನು/ಅತಿಕ್ರಮಣಗಳನ್ನು ಗುರುತಿಸಲು ಸಾರ್ವಜನಿಕರು ಕೈಜೋಡಿಸಿದಲ್ಲಿ ಹೆಚ್ಚಿನ ಒತ್ತುವರಿಗಳನ್ನು ಗುರುತಿಸುವಲ್ಲಿ ಪಾಲಿಕೆಗೆ ಸಹಕಾರಿಯಾಗುತ್ತದೆ. ಸದರಿ ಒತ್ತುವರಿಗಳನ್ನು ತೆರವುಗೊಳಿಸಿಕೊಂಡು ರಾಜಕಾಲುವೆಗಳನ್ನು ನಿರ್ಮಾಣ ಮಾಡುವುದರಿಂದ ಮಳೆನೀರು ಸರಾಗವಾಗಿ ಹರಿದು ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾನಿಯನ್ನು ತಡೆಗಟ್ಟಬಹುದಾಗಿರುತ್ತದೆ.
ಆದುದರಿಂದ ಸ್ಥಳೀಯ/ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ರಾಜಕಾಲುವೆಗಳ ಮೇಲೆ ಯಾವುದಾದರೂ ಒತ್ತುವರಿಗಳು ತಮ್ಮ ಗಮನಕ್ಕೆ ಬಂದಿದ್ದರೆ ಅಂತಹ ಒತ್ತುವರಿಗಳ ಮಾಹಿತಿಯನ್ನು ಭಾವಚಿತ್ರದೊಂದಿಗೆ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರು, ಬೃಹತ್ ನೀರುಗಾಲುವೆ ರವರಿಗೆ ದಿನಾಂಕ: 20-09-2023ರ ಅಪರಾಹ್ನ 2.00 ಗಂಟೆಯ ಒಳಗಾಗಿ ಸಲ್ಲಿಸಲು ಇಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ರವರು ಕೋರಿರುತ್ತಾರೆ.