ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 73ನೇ ಜನ್ಮದಿನಾಚರಣೆ : ಶುಭಾಶಯಗಳ ಮಹಾಪೂರ | JANATA NEWS
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 73ನೇ ಜನ್ಮದಿನಾಚರಣೆ ಇಂದು ಭಾನುವಾರ ಸಾಕಷ್ಟು ಸಾರ್ವಜನಿಕ ವಲಯಗಳಲ್ಲಿ ಕಂಡುಬಂದಿರುವುದು ವಿಶೇಷವಾಗಿತ್ತು. ಪ್ರಧಾನಿ ಮೋದಿ ಅವರ ಜನ್ಮದಿನಕ್ಕಾಗಿ ವಿಶ್ವ ನಾಯಕರು ಸೇರಿದಂತೆ ರಾಜ್ಯ ಹಾಗೂ ದೇಶದ ಗಣ್ಯರ ಶುಭಾಶಯಗಳ ಮಹಾಪೂರ ಹರಿದುಬಂದಿದೆ.
ಜನ್ಮದಿನದ ಶುಭಕೋರಿಕೆಯಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಮೌರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಮೊದಲಿಗರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ ಧನಖರ್, ಗೃಹ ಮಂತ್ರಿ ಅಮಿತ್ ಷಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ.
ಭಾನುವಾರದಿಂದ ಅಕ್ಟೋಬರ್ 2ರವರೆಗೆ (ಮಹಾತ್ಮ ಗಾಂಧಿ ಅವರ ಜನ್ಮದಿನ) ಸಮಾಜದ ವಿವಿಧ ವರ್ಗಗಳು ಇರುವಲ್ಲಿಗೆ ತೆರಳಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ‘ಸೇವಾ ಪಖವಾಡ’ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಿಎಂ ಯೋಗಿ ಆದಿತ್ಯನಾಥ್, ಸಿಎಂ ನಿತೀಶ್ ಕುಮಾರ್ ಮತ್ತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರು ‘ಎಕ್ಸ್’ ಮೂಲಕ ಶುಭಕೋರಿದರು.