ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ | JANATA NEWS

ಬೆಂಗಳೂರು : ಕಾವೇರಿ ನೀರಿನ ಹೋರಾಟಕ್ಕಾಗಿ ಇಡೀ ರಾಜ್ಯದಲ್ಲಿ ಎಲ್ಲ ರೈತ ಸಂಘಟನೆಗಳು ಆಯಾ ಜಿಲ್ಲೆಗಳಲ್ಲಿ ಪ್ರತಿಭಟನೆ ಹೋರಾಟಗಳನ್ನು ನಡೆಸುತ್ತಿವೆ ಅಲ್ಲದೆ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ಗೆ ರೈತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.
ಕಾವೇರಿ ನದಿ ನೀರಿನ ಹೋರಾಟ ಮಂಡ್ಯ, ಮೈಸೂರು, ಬೆಂಗಳೂರು ನಂತರ ಇಡೀ ಕರ್ನಾಟಕದಾದ್ಯಂತ ವ್ಯಾಪಿಸುತ್ತಿದೆ. ಇದೇ ಸೆಪ್ಟೆಂಬರ್ 26ರಂದು ಮಂಗಳವಾರ ಬೆಂಗಳೂರು ಬಂದ್ ಗೆ ಕರೆ ನೀಡಿದ್ದರೆ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಎಲ್ಲಾ ಖಾಸಗಿ ಸಾರಿಗೆ ಸಂಘಟನೆಗಳು ಬಂದ್ಗೆ ಬೆಂಬಲ ಕೊಡುತ್ತೇವೆ ಒಂದು ದಿನ ಓಲಾ ಉಬರ್ ಎಲ್ಲಾ ಗೂಡ್ಸ್ ವಾಹನ ಸಂಚಾರ ಸ್ಥಗಿತಗೊಳಿಸಲಿವೆ ಎಂದು ಸಾರಿಗೆ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.
ಬಂದ್‌ಗೆ ಖಾಸಗಿ ಸಾರಿಗೆ ಒಕ್ಕೂಟ ಸೇರಿದಂತೆ ಸುಮಾರು 32 ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಬೆಂಬಲ ಘೋಷಿಸಿವೆ. ಆದ್ದರಿಂದ ಸೆಪ್ಟೆಂಬರ್ 26ರ ಬೆಳಿಗ್ಗೆಯಿಂದಲೇ ಆಟೊ, ಟ್ಯಾಕ್ಸಿ, ಖಾಸಗಿ ಬಸ್‌ಗಳು ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿಯುತ್ತಿಲ್ಲ. ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು, ರ್ಯಾಲಿ ನಡೆಸುವುದಾಗಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.
ಅದೇ ರೀತಿ ಹೋಟೆಲ್ ಮಾಲೀಕರ ಸಂಘ ಕೂಡ ಬೆಂಗಳೂರು ಬಂದ್ ಗೆ ಬೆಂಬಲ ನೀಡಿವೆ. ಅಂದು ಎಲ್ಲಾ ಹೋಟೆಲ್ ಗಳು ಮುಚ್ಚಿರುತ್ತವೆ.ಅಲ್ಲದೆ ಬೆಂಗಳೂರು ಬಂದ್ಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಕೂಡ ಬೆಂಬಲ ಸೂಚಿಸಿದ್ದು ಕನ್ನಡದ ನೆಲ ಜಲ ಕುರಿತಾಗಿ ಏನೇ ಸಮಸ್ಯೆ ಎದುರಾದರೂ ನಾವು ಒಟ್ಟಿಗೆ ನಿಂತು ಹೋರಾಡುತ್ತೇವೆ ಎಂದು ನಿರ್ಮಾಪಕರ ಅಧ್ಯಕ್ಷ ತಿಳಿಸಿದ್ದಾರೆ
ಸೆಪ್ಟೆಂಬರ್ 29ರಂದು ಕನ್ನಡ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾಹಿತಿಗಳು, ವ್ಯಾಪಾರಿಗಳು ಎಲ್ಲರೂ ಇದಕ್ಕೆ ಬೆಂಬಲ ನೀಡಿ ಸಹಕರಿಸಬೇಕು ಎಂದಿದ್ದಾರೆ.