ಯಾವ ಸಮುದಾಯವನ್ನು ನಾನು ರಾಜಕೀಯ ಸ್ವರ್ಥಕ್ಕೆ ಬಳಕೆ ಮಾಡಿಕೊಂಡಿಲ್ಲ | JANATA NEWS

ರಾಮನಗರ : ಯಾವ ಸಮುದಾಯವನ್ನು ನಾನು ರಾಜಕೀಯ ಸ್ವರ್ಥಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಎಚ್ಡಿಕೆ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧ ಬಿಡದಿಯ ತೋಟದ ಮನೆಯಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಮೈತ್ರಿ ಸಂಬಂಧಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದು ಘೋಷಣೆ ಮಾಡಿದರು.
ರಾಮನಗರದ ಮಣ್ಣಲ್ಲಿಯೇ ನಾನು ಮಣ್ಣಗೋದು, ಈ ಮಣ್ಣಿನ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ಈ ನಾಡಿನ ಋಣ ತೀರಿಸುತ್ತೇನೆ. ದೇವೇಗೌಡರ 91ನೇ ವಯಸ್ಸಿನಲ್ಲಿ ಪಕ್ಷಕ್ಕೆ ಏನು ಆಘಾತ ಆಗಿದೆ, ಅದನ್ನು ಅವರು ಯೋಚನೆ ಮಾಡುತ್ತಿದ್ದಾರೆ. ಕಾವೇರಿ ಬಗ್ಗೆ ಏನು ಅನ್ಯಾಯ ಆಗಿದೆ, ಅದನ್ನು ನಾನು ಸರಿ ಮಾಡುತ್ತೇನೆ. ಈ ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೆಯದು ಆಗುತ್ತದೆ. ನಮ್ಮ ನೀರು ಉಳಿಸೋದಕ್ಕೆ ಏನು ಮಾಡಬೇಕು, ಅದನ್ನು ಮಾಡುತ್ತೇನೆ.
ಜಲಧಾರೆಯಲ್ಲೂ ಇದಕ್ಕೆ ಪರಿಹಾರ ಇದೆ, ಜನರು ಅವಕಾಶ ಕೊಡಲಿಲ್ಲ. ಈ ಮೈತ್ರಿಯಿಂದ ಅಧಿಕಾರಕ್ಕೆ ಬರುವುದು ನನ್ನ ಉದ್ದೇಶ ಅಲ್ಲ. ನೀರಾವರಿ ಅನ್ಯಾಯ ಸರಿ ಮಾಡುವುದೇ ನನ್ನ ಗುರಿ. ಇದೇ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ನೀರಾವರಿ ಯೋಜನೆಗಳಿಗೆ ಪರಿಹಾರ ಮಾಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಮುಸ್ಲಿಂ ಬಾಂಧವರು ಎಚ್ಚರಿಕೆಯಿಂದ ಇರಿ, ಕೆಲ ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ. ಮುಸ್ಲಿಂ ಬಾಂಧವರ ಬಗ್ಗೆ ನಮ್ಮ ಕಮಿಟ್‌ಮೆಂಟ್ ಏನು ಅಂತ ಎಲ್ಲರಿಗೂ ಗೊತ್ತು. ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಮುಂದಿನ ಒಂದು ತಿಂಗಳ ಒಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡಲಿದ್ದೇವೆ. ಪಕ್ಷದ ಮುಖಂಡರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಈ ಬಗ್ಗೆ ಮುಕ್ತವಾಗಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಯಾವ ಮುಖಂಡನ ರಾಜಕೀಯ ಮಸಕು ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರ ಹಿತ ಕಾಯುವುದು ನಮ್ಮ ಬದ್ಧತೆ. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಾನು ಪ್ರಾಮಾಣಿಕವಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಇನ್ನು ಮೇಲೆ ಮಾತನ್ನು ಕಡಿಮೆ ಮಾಡಿ, ಕೆಲಸದ ಕಡೆ ಹೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.