ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ, ಕಾನೂನು ಎಲ್ಲರಿಗೂ ಒಂದೇ - ಮಧು ಬಂಗಾರಪ್ಪ | JANATA NEWS

ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗದ ರಾಗಿಗುಡ್ಡದಲ್ಲಿ ಭಾನುವಾರ ಕಿಡಿಗೇಡಿಗಳ ಕಲ್ಲುತೂರಾಟದಿಂದ ಹಾನಿಗೊಳಗಾದ ಮನೆಗಳಿಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಲಭೆಯಲ್ಲಿ ಆಸ್ತಿ ಪಾಸ್ತಿ ಹಾನಿಯಾದ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದು ಧೈರ್ಯ ತುಂಬಿದರು. ಹಾಗೆಯೇ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಕುರಿತು ವೈದ್ಯರೊಂದಿಗೆ ಮಾತನಾಡಿದರು.
ಈ ಕುರಿತು ಹೇಳಿರುವ ಸಚಿವ ಮಧು ಬಂಗಾರಪ್ಪ ಅವರು, "ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ. ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿ ಶಿಕ್ಷೆ ಆಗುತ್ತದೆ." ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ರಾಗಿಗುಡ್ಡದ ಬಳಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳು ಘರ್ಷಣೆಗೊಂಡಿದ್ದರಿಂದ 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಹಿಂಸಾಚಾರದಲ್ಲಿ ಭಾಗಿಯಾಗಿದ್ದ 60 ಜನರನ್ನು ಸೋಮವಾರ ಬಂಧಿಸಲಾಗಿದೆ. ಘರ್ಷಣೆಗೆ ಸಂಬಂಧಿಸಿದಂತೆ 24 ಪ್ರಕರಣಗಳು ದಾಖಲಾಗಿವೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.