ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರ ದೂರು | JANATA NEWS

ಬೆಂಗಳೂರು : ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಅಂತ ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಮಗಳನ್ನು ಕಳೆದುಕೊಂಡ ಪೋಷಕರು ಆರೋಪಿಸಿದ್ದಾರೆ.
ಯಲಹಂಕ ನ್ಯೂಟೌನ್ನಲ್ಲಿ ವಾಸವಾಗಿದ್ದ ಮನೆಯಲ್ಲಿ ರೇಖಾ ಎಂಬಾಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿ ಸಂತೋಷ್ ಕೊಲೆ ಮಾಡಿರುವುದಾಗಿ ರೇಖಾಳ ಪೋಷಕರು ದೂರು ನೀಡಿದ್ದು, ಈ ಸಂಬಂಧ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ರೇಖಾ ಮತ್ತು ಸಂತೋಷ್ ಇಬ್ಬರು ತಮಿಳುನಾಡು ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದರು, ಶಾಲೆಯಿಂದಲೇ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದ ಜೋಡಿ, ಕಳೆದ ಒಂದೂವರೆ ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಂತೆ. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ 6 ತಿಂಗಳ ಹೆಣ್ಣು ಮಗು ಕೂಡ ಇದೆ.
ಸಂತೋಷ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ ರೇಖಾ ಗೃಹಿಣಿಯಾಗಿದ್ದಳು. ಇಬ್ಬರು ನಡುವೆ ಅನೋನ್ಯತೆಯಿಂದಲೇ ಇದ್ದರು. ಕಾಲಕ್ರಮೇಣ ವರದಕ್ಷಿಣೆ ನೀಡುವಂತೆ ಸಂತೋಷ್ ಪೀಡಿಸುತ್ತಿದ್ದ. ಮದುವೆ ವೇಳೆ ಚಿನ್ನ ಹಾಗೂ ಹಣವನ್ನು ವರದಕ್ಷಿಣೆ ರೂಪದಲ್ಲಿ ರೇಖಾ ಮನೆಯವರು ನೀಡಿದ್ದರು.
ಮದುವೆ ಆದಾಗಿನಿಂದಲೂ ಸಂತೋಷ್ ಹಣಕ್ಕಾಗಿ ಹೆಂಡತಿಯನ್ನು ಪೀಡಿಸುತ್ತಿದ್ದನಂತೆ. ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರೂ, ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದನಂತೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಸಾವಿನ ಹಿಂದೆ ಅಳಿಯ ಸಂತೋಷ್ ಕೈವಾಡವಿದೆ. ರೇಖಾಳನ್ನು ಸಾಯಿಸಿ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ನೇಣುಬಿಗಿದುಕೊಂಡಿರುವ ಹಾಗೆ ಬಿಂಬಿಸಿದ್ದಾನೆ ಎಂದು ಮೃತಳ ಪೋಷಕರು ದೂರು ನೀಡಿದ್ದಾರೆ.
ಸದ್ಯ ರೇಖಾ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆರೋಪಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.