ಕುಟುಂಬದ ಸಜೀವ ದಹನ: ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಶಂಕೆ! | JANATA NEWS
ಶಿವಮೊಗ್ಗ : ಜಿಲ್ಲೆಯ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯಲ್ಲಿ ಒಂದೇ ಕುಟುಂಬದ ಮೂವರು ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ.
ಕುಟುಂಬದ ಹಿರಿಯರಾದ ಅರ್ಚಕ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನ (55), ಹಿರಿಯ ಪುತ್ರ ಶ್ರೀರಾಮ್ (30) ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದಾರೆ , ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದಾರೆ. ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು, ಎಸಿ ಸತ್ಯನಾರಾಯಣ, ತಾಸಿಲ್ದಾರ್ ಮೆಸ್ಕಾಂ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಆರಗ ಜ್ಞಾನೇಂದ್ರ ಮಾತನಾಡಿ, ಘಟನೆಯಿಂದ ತೀವ್ರ ನೋವಾಗಿದೆ. ಮೃತ ರಾಘವೇಂದ್ರ ಕೆಕೋಡ್ ಕುಟುಂಬಕ್ಕೆ 10 ಎಕರೆ ಅಡಿಕೆ ತೋಟವಿದೆ. 20 ರಿಂದ 25 ವರ್ಷದಿಂದ ಈ ಕುಟುಂಬ ನನಗೆ ಪರಿಚಯ ಇದೆ. ಆರ್ಥಿಕವಾಗಿ ಕುಟುಂಬಸ್ಥರು ಚೆನ್ನಾಗಿ ಇದ್ದಾರೆ ಬಡತನ ಏನು ಇಲ್ಲ. ರಾಘವೇಂದ್ರ ಅವರ ಅಣ್ಣ ತಮ್ಮಂದಿರು ಎಲ್ಲರೂ ಹೊರಗೆ ಇದ್ದಾರೆ.. ಎಲ್ಲರೂ ಚೆನ್ನಾಗಿ ಇದ್ದಾರೆ. ರಾಘವೇಂದ್ರ ಕುಟುಂಬ ಮಾತ್ರ ಗ್ರಾಮದಲ್ಲಿ ವಾಸವಾಗಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಓರ್ವ ಮಗನ ಸ್ಥಿತಿ ಗಂಭೀರವಾಗಿದೆ. ಸದ್ಯ ಘಟನೆಗೆ ಕಾರಣ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಪೊಲೀಸ್ ತನಿಖೆಯಿಂದಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂದಿದ್ದಾರೆ. ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಬಂದಿ ಪರಿಶೀಲನೆ ಮಾಡುತ್ತಿದೆ ಎಂದಿದ್ದಾರೆ ಎನ್ನಲಾಗಿದೆ.
ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ ಮಿಥುನ್ ಕುಮಾರ್, ಮನೆಯ ಕೋಣೆಯಲ್ಲಿ ಮೂವರ ಮೃತ ದೇಹ ಪತ್ತೆಯಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಘಟನೆ ನಡೆದ ಅರ್ಧಗಂಟೆಯೊಳಗೆ ತೀರ್ಥಹಳ್ಳಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಭರತಗೆ ಶೇಕಡ 40 ರಿಂದ 50ರಷ್ಟು ಸುಟ್ಟ ಗಾಯಗಳಾಗಿದೆ. ಅವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ ತಂಡ, ಸೀನ್ ಆಫ್ ಕ್ರೈಮ್ ಆಫೀಸರ್ಸ್ ತಂಡ ಹಾಗೂ ಡಾಗ್ ಸ್ಕ್ವಾಡ್ ಆಗಮಿಸಿದೆ ಪರಿಶೀಲನೆ ಮಾಡುತ್ತಿದ್ದಾರೆ ಎಂದಿದ್ದಾರೆ.