ದಸರಾದಲ್ಲಿ ಉರ್ದು ಕವಿಗೋಷ್ಠಿ : ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ | JANATA NEWS
ಬೆಂಗಳೂರು : ನಾಡಹಬ್ಬ ದಸರಾ ಕಾರ್ಯಕ್ರಮ ಪಟ್ಟಿಯಲ್ಲಿ ಉರ್ದು ಕವಿಗೋಷ್ಠಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿದ್ದು ಸಾಕಷ್ಟು ಗೊಂದಲ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸುನಿಲ್ ಕುಮಾರ್ ಕಾರ್ಕಳ ಅವರು ಆಕ್ರೋಶ ವ್ಯಕ್ತಪಡಿಸಿದ್ದು ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ ಎಂದು ಹೇಳಿದ್ದಾರೆ.
"ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕ್ರತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ ?
ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ."
"ಟಿಪ್ಪು ನಿಜಗನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಮಹಿಷ ದಸರಾ, ಉರ್ದು ಕವಿಗೋಷ್ಠಿ ಜತೆಗೆ ಇನ್ನೆಷ್ಟು ಸಾಂಸ್ಕ್ರತಿಕ ದೌರ್ಜನ್ಯಕ್ಕೆ ನಿಮ್ಮ ಸಹಮತ ?
ದಸರಾದಲ್ಲಿ ನಾಡದೇವಿ ಚಾಮುಂಡಿ ಹಾಗೂ ಮೈಸೂರು ಒಡೆಯರ್ ಅವರ ವೈಭವವಾಗಬೇಕೇ ವಿನಾ ಟಿಪ್ಪು ಸಂಸ್ಕ್ರತಿಯಲ್ಲ."
"ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಸೂಕ್ಷ್ಮತೆ ಹಾಗೂ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವರ್ಷಪೂರ್ತಿ ಕರ್ನಾಟಕ ಸಂಭ್ರಮ ಆಚರಿಸಲು ಹೊರಟವರು ದಸರಾದಲ್ಲಿ ಉರ್ದು ಸಂಭ್ರಮ ನಡೆಸಿದರೆ ಹೇಗೆ?" ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.