ಕೈಗಾರಿಕಾ ಘಟಕಗಳಿಗೆ ನಿರಂತರ ವಿದ್ಯುತ್ ಪೂರೈಕೆ – ಬೆಸ್ಕಾಂ ಭರವಸೆ | JANATA NEWS

ಬೆಂಗಳೂರು : ರಾಜ್ಯ ವಿದ್ಯುತ್ ಅಭಾವವನ್ನು ಎದರಿಸುತ್ತಿದ್ದರೂ ಬೆಸ್ಕಾಂ ವಲಯದ ಕೈಗಾರಿಕಾ ಪ್ರದೇಶಗಳಿಗೆ ನಿರಂತರ ವಿದ್ಯುತ್ ಪೂರೈಸುವುದಾಗಿ ಬೆಸ್ಕಾಂ ಭರವಸೆ ನೀಡಿದ್ದು, ಕೈಗಾರಿಕಾ ವಲಯದ ಪ್ರತಿನಿಧಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅಧ್ಯಕ್ಷತೆಯಲ್ಲಿ, ಬೆಸ್ಕಾಂ ವಲಯದ ಕೈಗಾರಿಕಾ ಪ್ರತಿನಿಧಿಗಳ ಜೊತೆ ಮಂಗಳವಾರ ನಡೆಸಿದ ವಿಡಿಯೋ ಕಾನ್ಫ್ ರೆನ್ಸ್ ಸಭೆಯಲ್ಲಿ, ಕೈಗಾರಿಕಾ ಘಟಕಗಳ ಪ್ರತಿನಿಧಿಗಳಿಗೆ ಈ ಸ್ಪಷ ಭರವಸೆ ನೀಡಲಾಗಿದೆ.
ಯಾವುದೇ ಕಾರಣಕ್ಕೂ ಕೈಗಾರಿಕಾ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ, ಹೆಚ್ಚುವರಿ ವಿದ್ಯುತ್ ಖರೀದಿಗೆ ಈಗಾಗಲೇ ರಾಜ್ಯ ಸರಕಾರ ಕ್ರಮ ಕೈಗೊಂಡಿದ್ದು, ಕೈಗಾರಿಕಾ ಘಟಕಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಗೌರವ ಗುಪ್ತಾ ಹಾಗೂ ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಪೀಣ್ಯ, ಬಿಡದಿ, ಹೊಸಕೋಟೆ, ಇಲೆಕ್ಟ್ರಾನಿಕ್ ಸಿಟಿ, ಕುಂಬಳಗೋಡು, ಮಾಲೂರು, ನೆಲಮಂಗಲ, ದಾಬಸಪೇಟೆ, ದಾವಣಗೆರೆ, ತುಮಕೂರು, ಕೋಲಾರ, ಗೌರಿಬಿದನೂರು, ವೈಟ್ ಫೀಲ್ಡ್ ಮತ್ತು ಹೆರೋಹಳ್ಳಿ ಕೈಗಾರಿಕಾ ವಲಯಗಳ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.