ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಉತ್ತರ ಕೊಡುತ್ತದೆ | JANATA NEWS
ಬೆಂಗಳೂರು : ಬಿಜೆಪಿಯವರ ಷಡ್ಯಂತ್ರ ಏನೇ ಇರಬಹುದು, ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಎಲ್ಲಾ ಉತ್ತರ ಕೊಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಬಿಐ ತನಿಖೆ ಸಂಬಂಧ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಸಿಬಿಐ ತನಿಖೆ ರದ್ದು ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಇಂದು ನ್ಯಾಯಮೂರ್ತಿ ಕೆ.ನಟರಾಜನ್ ನೇತೃತ್ವದ ಪೀಠ ಸಿಬಿಐ ತನಿಖೆಗೆ ಅನುಮತಿ ನೀಡಿ ತೀರ್ಪು ನೀಡಿದೆ.
ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಬಗ್ಗೆ ಮಾತನಾಡಿದ ಅವರು, ಶೇ 90 ರಷ್ಟು ತನಿಖೆ ನಡೆಸಿದ್ದೇವೆ ಎಂದು ಸಿಬಿಐ ಹೇಳಿದೆ.
ನಾನು, ನನ್ನ ಹೆಂಡತಿ ಹಾಗೂ ಕುಟುಂಬದವರು ನನ್ನ ಆಸ್ತಿ ಯಾವುದು, ನನ್ನ ಹೆಂಡತಿಯ ಆಸ್ತಿ ಯಾವುದು ಎಂದು ಹೇಳಬೇಕು. ನನ್ನನ್ನೇ ಕರೆಸದೆ, ಕೇಳದೆ ಅದು ಹೇಗೆ ಶೇಕಡಾ 90 ರಷ್ಟು ತನಿಖೆ ಮಾಡಿದರೋ ಗೊತ್ತಿಲ್ಲ ಎಂದರು.
ನಾವು ನ್ಯಾಯಾಲಯಕ್ಕೆ ಸಿಬಿಐ ದಾಖಲಿಸಿರುವ ಎಫ್ಐಆರ್ ಸರಿ ಇಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೆವು. ರಾಜಕೀಯ ಉದ್ದೇಶದಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದ ವೇಳೆ ತನಿಖೆಗೆ ಆದೇಶ ನೀಡಿದ್ದರು ಎಂದು ಹೇಳಿದರು.
ನನಗೆ ನ್ಯಾಯಲಯದ ಬಗ್ಗೆ ಗೌರವ, ನಂಬಿಕೆಯಿದೆ. ಅಗತ್ಯ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತೇನೆ. ಏನೇ ಪ್ರೇರಣೆ ಇರಬಹುದು, ಆದರೆ ನಾನು ಕಾನೂನು ಚೌಕಟ್ಟಿನಲ್ಲೇ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.