ಇಬ್ರಾಹಿಂ ಉಚ್ಛಾಟನೆ, ಜೆಡಿಎಸ್ ಹಂಗಾಮಿ ರಾಜ್ಯಾಧ್ಯಕ್ಷರಾಗಿ ಹೆಚ್.ಡಿ.ಕುಮಾರಸ್ವಾಮಿ ಆಯ್ಕೆ | JANATA NEWS
ಬೆಂಗಳೂರು : ದೇವೇಗೌಡರು ಇಂದು ಕೋರ್ ಕಮಿಟಿ ಸಭೆ, ಶಾಸಕಾಂಗ ಸಭೆ, ರಾಜ್ಯ ಕಾರ್ಯಕಾರಣಿ ಸಭೆ ಮಾಡಿ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಘಟಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಲಾಗಿದ್ದು ಹಂಗಾಮಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಹೆಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದರು.
ರಾಜ್ಯ ಘಟಕದ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಕಾರ್ಯನಿರ್ವಹಿಸಲು ಇನ್ನು ಮೂರು ದಿನದಲ್ಲಿ ಕೆಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ದೇವೇಗೌಡರು ತಿಳಿಸಿದರು.