ಕಮೀಷನ್ ಕಲೆಕ್ಷನ್ ಗಾಗಿ ಕಾಂಗ್ರೆಸ್ ಸರಕಾರದಿಂದ ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿ | JANATA NEWS
ಬೆಂಗಳೂರು : ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶವಿದ್ದರೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಲು ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಕಮಿಷನ್, ಪರ್ಸೆಂಟೇಜ್ ಸರ್ಕಾರ. ನಾಡಿನ ಸಂಪತ್ತನ್ನ ಲೂಟಿ ಮಾಡ್ತಿದ್ದಾರೆ. ನಾಡಿನ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚೆ ಆಗುತ್ತಿಲ್ಲ. ಟ್ರಾನ್ಸ್ಫರ್ಗೆ ದರ ನಿಗದಿ ಮಾಡಿದ್ದಾರೆ. ಸತ್ಯ ಹರಿಶ್ಚಂದ್ರರ ಸರ್ಕಾರ ಎಂದು ವ್ಯಂಗ್ಯ ಮಾಡಿದ್ದಾರೆ. ಜನರ ಕಷ್ಟ ಆಲಿಸೋದನ್ನ ಬಿಟ್ಟು ಸಿದ್ದರಾಮಯ್ಯ ಕ್ರಿಕೆಟ್ ನೋಡೋಕೆ ಹೋಗ್ತಾರೆ ಎಂದು ಕಿಡಿಕಾರಿದ್ದಾರೆ.
ಜನ ನಿಮ್ಮನ್ನ ತಿರಸ್ಕಾರ ಮಾಡಿದ್ದಾರೆ, ನಾವು ಮಾಡಿದ್ದನ್ನ ಜನ ಒಪ್ಪಿಕೊಳ್ತಾರೆ ಅಂತ ಹೇಳಿದ್ದಾರೆ. ಪರ್ಸೆಂಟೇಜ್, ಕಮಿಷನ್ ಬಗ್ಗೆ ಸರ್ಕಾರಕ್ಕೆ ಪ್ರಚಾರ ದೊರೆಯುತ್ತಿದೆ. ಹಿಂದೆ ಕಮಿಷನ್ ಅಸ್ತ್ರ ಪ್ರಯೋಗಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಮಿಷನ್, ಪರ್ಸೆಂಟೇಜ್ ವಿಡಂಬನಾತ್ಮಕವಾಗಿ ಮನರಂಜನೆ ದೊರೆಯುತ್ತಿದೆ. ಮನರಂಜನೆ ಜೊತೆಗೆ ನಾಡಿನ ಸಂಪತ್ತನ್ನ ಹೇಗೆ ಲೂಟಿ ಮಾಡ್ತಿದ್ದಾರೆ ಅಂತ ವರದಿಯಾಗ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ನಿಜ. ಆದರೆ, ಇತರೆ ಮೂಲಗಳಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಅಧಿಕಾರ ಬಂದಾಗಿನಿಂದಲೇ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ದಾಸ್ತಾನು ಮಾಡಿಕೊಳ್ಳಬಹುದಿತ್ತು. ಖರೀದಿ ವ್ಯವಹಾರ ನಡೆಸಿ ಕಮೀಷನ್ ಹೊಡೆಯುವ ದುರುದ್ದೇಶದಿಂದ ವಿದ್ಯುತ್ ಉತ್ಪಾದನೆಯನ್ನು ಉಪೇಕ್ಷೆ ಮಾಡಲಾಗಿದೆ ಎಂದು ದೂರಿದರು ಅವರು.
1627 ಮಿಲಿಯನ್ ಯುನಿಟ್ ವಿದ್ಯುತ್ ಐದು ತಿಂಗಳಲ್ಲಿ ಖರೀದಿ ಮಾಡಿದ್ದಾರೆ. ಏಳು ಗಂಟೆ ವಿದ್ಯುತ್ ಕೊಟ್ಟರೂ 28 ಕೋಟಿ ಯುನಿಟ್ ವಿದ್ಯುತ್ ಬೇಕು. 25 ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಹೇಳ್ತಿದ್ದಾರೆ. ನಾನು ಹೇಳಿದಂತೆ ಇತರ ಮೂಲಗಳಿಂದ ಸರಿಯಾಗಿ ಉತ್ಪಾದನೆ ಮಾಡಿದ ಐದು ಕೋಟಿ ಯೂನಿಟ್ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಬಹುದು. ಖರೀದಿ ಮಾಡುವುದು ಬೇಡ ನಾವೇ ಉತ್ಪಾದನೆ ಮಾಡಬಹುದು.
ಗ್ಯಾರೆಂಟಿ ಕಡೆ ಗಮನ ಕೊಟ್ಟ ಕಾಂಗ್ರೆಸ್ನವರು ವಿದ್ಯುತ್ ಉತ್ಪಾದನೆ ಬಗ್ಗೆ ಮರೆತಿದ್ದಾರೆ. ಈಗ ಕಮಿಷನ್ಗಾಗಿ ಕೃತಕ ಅಭಾವ ಸೃಷ್ಟಿ ಮಾಡ್ತಿದ್ದಾರಾ? ನನ್ನ ಕಾಲದಲ್ಲಿ ಎರಡು ಅವಧಿಯಲ್ಲೂ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ ಎಂದು ತಿಳಿಸಿದರು.
ಸಮರ್ಥವಾಗಿ ದುಡ್ಡು ಹೊಡೆಯುವ ಕಾರ್ಯಕ್ರಮಗಳನ್ನಷ್ಟೇ ಕಾಂಗ್ರೆಸ್ಸಿನವರು ಹಾಕಿಕೊಳ್ಳುತ್ತಿದ್ದಾರೆ. ಅದೇ ಮುತುವರ್ಜಿಯನ್ನು ಜನರ ಬಗ್ಗೆ ತೂರಿಸಿದ್ದಿದ್ದರೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೃತಕ ಸೃಷ್ಟಿ ಹಿಂದೆ ಇರೋದು ಸರ್ಕಾರ. ಜಾರ್ಜ್ಗೆ ದುಡ್ಡಿನ ಅವಶ್ಯಕತೆ ಇಲ್ಲ. ಪಾವಗಡ ಸೋಲಾರ್ ಪಾರ್ಕ್ ಯಾಕೆ ಸರ್ಕಾರ ಮಾಡಲಿಲ್ಲ. ಯಾರ ಬೇನಾಮಿಗಳು ಅದರ ಹಿಂದೆ ಇದ್ದಾರೆ. ಏಳು ನಿಮಿಷ ಅರ್ಜಿ ಸಲ್ಲಿಕೆಗೆ ಅವಕಾಶ ಇತ್ತು. 9.12 ರೂಪಾಯಿ ಗ್ರಾಹಕರಿಗೆ ಚಾರ್ಜ್ ಮಾಡ್ತಿದ್ದು, ಕರೆಂಟ್ ಈಗ ದುಬಾರಿ ಮಾಡಿದ್ದಾರೆ. ವಿದ್ಯುತ್ ಖರೀದಿ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಪ್ರತಿ ತಿಂಗಳಿಗೆ ಎಷ್ಟು ಖರ್ಚು ಆಗ್ತಿದೆ ಎಂದು ಹೇಳಲಿ ಎಂದು ಆಗ್ರಹಿಸಿದರು.
ಮಾತಿಗೆ ಮುಂಚೆ ಕಮೀಷನ್, ಪರ್ಸಂಟೇಜ್, ವರ್ಗಾವಣೆ ಧಂದೆ ಮಾಡಿಕೊಂಡು ಕೂತಿದ್ದಾರೆ ಕಾಂಗ್ರೆಸ್ ನವರು. ಇನ್ನೊಂದು ತಿಂಗಳು ಕಳೆದರೆ ರಾಜ್ಯದ ರೈತರ ಪರಿಸ್ಥಿತಿ ಮತ್ತೂ ಬಿಗಡಾಯಿಸುತ್ತದೆ. ಸಾಲ ಕೊಟ್ಟವರು ಮನೆ ಹತ್ತಿರ ಬರುತ್ತಾರೆ. ವಿದ್ಯುತ್ ಕ್ಷಾಮ ಮತ್ತಷ್ಟು ತೀವ್ರವಾಗಲಿದೆ. ಇವರು ನೋಡಿದರೆ ವರುಷದ ಕೂಳಿಗೆ ಎಳ್ಳೂನೀರು ಬಿಟ್ಟು ಹರುಷದ ಕೂಳಿನ ಗ್ಯಾರಂಟಿ ಮಾದರಿಯನ್ನು ಇಡೀ ದೇಶಕ್ಕೆ ಬೃಹದೀಕರಿಸಿ ವಿಸ್ತರಣೆ ಮಾಡುತ್ತಿದ್ದಾರೆ. ಮುಂದೆ ಎಲ್ಲಾ ರಾಜ್ಯಗಳಲ್ಲಿಯೂ ಇದೇ ದುಃಸ್ಥಿತಿಯನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಹುನ್ನಾರವಾಗಿದೆ.