ಇಡೀ ದೇಶದಲ್ಲಿ ಜಾತಿ ಜನಗಣತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ | JANATA NEWS

ಬೆಂಗಳೂರು : ಡೀ ದೇಶದಲ್ಲಿ ಜಾತಿ ಜನಗಣತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಈ ಹಿಂದೆ ನನ್ನ ಅವಧಿಯಲ್ಲಿ ವರದಿ ಬಿಡುಗಡೆ ಆಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿಗಣತಿ ಮಾಡಿಸಿದ್ದೆ. ನಂತರ ಬಂದ ಸರ್ಕಾರಗಳು ಜಾತಿಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಜಾತಿಗಣತಿ ವರದಿ ಕೊಡುತ್ತಾರೆ. ನಾವು ಸ್ವೀಕರಿಸುತ್ತೇವೆ ಎಂದರು.
ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಅವಕಾಶ ಸಿಕ್ಕರೆ ಎಲ್ಲರೂ ಮೇಧಾವಿಗಳಾಗ್ತಾರೆ. ಪ್ರತಿಭೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅವಕಾಶ ಸಿಕ್ಕರೆ, ಶಿಕ್ಷಣದ ಅನುಕೂಲಗಳು ಸಿಕ್ಕರೆ ಎಲ್ಲರ ಪ್ರತಿಭೆಗಳೂ ಹೊರಗೆ ಬರುತ್ತದೆ. ಆದ್ದರಿಂದ ಸ್ವಾಭಿಮಾನಿಗಳಾಗಿ, ಉತ್ತಮ ಪ್ರಜೆಗಳಾಗಿ ಬಾಳಲು ಶಿಕ್ಷಣ ಅತ್ಯಂತ ಅಗತ್ಯ. ಎಲ್ಲರೂ ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಪಡೆಯಲು ಸಹಕರಿಸಿ ಎಂದು ಕರೆ ನೀಡಿದರು.
ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಜಾತಿಗಣತಿಗೆ 165 ಕೋಟಿ ರೂ. ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರ ಇದ್ದಾಗ ವರದಿ ಬಿಡುಗಡೆ ಮಾಡಿದ್ರೆ ತೆಗೆದುಹಾಕ್ತೀವಿ ಅಂತಾ ಅಧಿಕಾರಿಗಳಿಗೆ ಹೆಚ್ಡಿ ಕುಮಾರಸ್ವಾಮಿ ಹೆದರಿಸಿದ್ದರು. ನವೆಂಬರ್ನಲ್ಲಿ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ವರದಿ ಕೊಡುತ್ತಾರೆ. ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಆಗಬೇಕಾದರೆ ಜಾತಿಗಣತಿ ಮುಖ್ಯ. 90ರ ದಶಕದಲ್ಲೇ ಜಾತಿಗಣತಿ ನಿಲ್ಲಿಸಿಬಿಟ್ಟರು. ಆಗಿನಿಂದ ಆಗಲೇ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ಸಮಾಜದಲ್ಲಿ ಬಹುತೇಕರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇಡೀ ನಮ್ಮೂರಿಗೆ ನಾನೇ ಮೊದಲು ಲಾಯರ್. ಅನೇಕರು ಪದವೀಧರರಾಗಿದ್ದರೂ ನಾನೇ ಲಾಯರ್.
ನಮ್ಮಪ್ಪ ಚೆನ್ನಪ್ಪಯ್ಯ ಅಂತ ಶಾನುಭೋಗರ ಮಾತನ್ನ ಬಹಳ ಕೇಳುತ್ತಿದ್ದರು. ಎಂಎಸ್ಸಿ ನನಗೆ ಸೀಟ್ ಸಿಕ್ಕಿರಲಿಲ್ಲ, ಆಗ ವ್ಯವಸಾಯ ಮಾಡೋಕೆ ಹೋದೆ. ನೀನು ಕುರುಬ, ಲಾಯರ್ ಆಗಿ ಕೆಲಸ ಮಾಡೋಕೆ ಆಗುತ್ತಾ? ನಮ್ಮಪ್ಪ ಚೆನ್ನಪ್ಪಯ್ಯ ಮಾತು ಕೇಳಿ ನೀನು ಲಾ ಮಾಡ್ಬೇಡ ಅಂದ್ರು. ಆಮೇಲೆ ಪಂಚಾಯಿತಿ ಸೇರಿಸಿ ಊರಿನವರಿಗೆಲ್ಲ ಹೇಳಿದೆ. ಭಾಗ ಕೊಟ್ಟು ಬಿಡಪ್ಪ ಅಂದೆ, ಅದಕ್ಕೆ ಲಾ ಸೇರಿಸಿದರು ಎಂದು ಹೇಳಿದ್ದಾರೆ.
ನಾನು ಬಿಎಸ್ಸಿ ಓದುವಾಗ ಹೋಟೆಲ್‌ನಿಂದ ಸಾರು ತಂದು ರೂಮಲ್ಲಿ ಅನ್ನ ಮಾಡಿಕೊಂಡು ಊಟ ಮಾಡಬೇಕಿತ್ತು. ಇಂಥಾ ಸ್ಥಿತಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಇರುವುದರಿಂದ ನಾನು ವಿದ್ಯಾಸಿರಿ ಕಾರ್ಯಕ್ರಮ ಜಾರಿಗೆ ತಂದೆ ಎಂದು ತಿಳಿಸಿದರು.