ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ, ಶಾಸಕರಲ್ಲ! | JANATA NEWS
ಬೆಂಗಳೂರು : ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎರಡೂವರೆ ವರ್ಷದ ನಂತರ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕೆಲ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲಾ ಶಾಸಕರು ಹಾಗೆ ಹೇಳಿದ್ದಾರೆಯೇ ? ಎಂದು ಪ್ರಶ್ನಿಸಿದರು. ಹಾಗೇನಾದರೂ ಹೇಳಿದ್ದರೆ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಸಂಪುಟ ಪುನಾರಚನೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆಯೇ ಹೊರತು ಶಾಸಕರಲ್ಲ ಎಂದು ಸಿಎಂ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಶಾಸಕರು ನೀಡಿದ ಗೊಂದಲ ಮೂಡಿಸುವ ಹೇಳಿಕೆಗಳು, ಪಕ್ಷದೊಳಗಿನ ವಿದ್ಯಮಾನಗಳಿಂದಾಗಿ ಸಂಪುಟ ಪುನರ್ ರಚನೆ ನಡೆಸಲಾಗುತ್ತಿದೆ ಎನ್ನುವ ಚರ್ಚೆ ಜೋರಾಗಿತ್ತು.
ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಜಾತಿ ಗಣತಿ ವರದಿಯನ್ನು ತಮ್ಮ ಸರಕಾರ ಸ್ವೀಕರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅಲ್ಲಿ ಚರ್ಚೆ ನಡೆಸಲಾಗುವುದು. ಚರ್ಚೆಯ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.