ಕೊನೆಗೂ ಬಲೆಗೆಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಸ್ಥಳೀಯರು | JANATA NEWS

ಬೆಂಗಳೂರು : ಬೆಂಗಳೂರಿನ ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮೂರು ದಿನಗಳ ನಂತರ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಅಕ್ಟೋಬರ್ 27 ರಂದು ರಾತ್ರಿ ಚಿರತೆ ಅಪಾರ್ಟ್ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಂದಿನಿಂದ ಚಿರತೆ ಕಾಣಿಸಿಕೊಂಡಿರಲಿಲ್ಲ.
ಚಿರತೆ ಕಾಣಿಸಿಕೊಂಡ ಹಿನ್ನೆಲೆ ಸೆರೆಹಿಡಿಯಲು ಟಾಸ್ಕ್ ಫೋರ್ಸ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಧನರಾಜ್ ಎಂಬುವರು ಚಿರತೆ ದಾಳಿಯಿಂದ ಗಾಯಗೊಂಡಿದ್ದರು. ಚಿರತೆ ದಾಳಿಯಿಂದ ಧನರಾಜ್ ಕಾಲು, ಹೊಟ್ಟೆ ಭಾಗಕ್ಕೆ ಗಾಯವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇಂದು ಬೆಳಗ್ಗೆ ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಕೃಷ್ಣಾ ರೆಡ್ಡಿ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಚಿರತೆ ಇರುವ ಬಗ್ಗೆ , ರಾತ್ರಿ ಕಾಂಪೌಂಡ್ ಜಿಗಿದು ಒಡಾಡುತ್ತಿದ್ದುದನ್ನು ಅಲ್ಲಿನ ನಿವಾಸಿಗಳು ನೋಡಿದ್ದರು. ಆತಂಕಗೊಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಆದರೆ ಚುಚ್ಚುಮುದ್ದಿಗೂ ಬಗ್ಗದ ಚಿರತೆ ಕಟ್ಟಡದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜಿಗಿದು ವೈದ್ಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಿತ್ತು.
ಅರಣ್ಯಾಧಿಕಾರಿಗಳು ಅತ್ಯುನ್ನತ ತಂತ್ರಜ್ಞಾನ ಬಳಸಿ ಚಿರತೆಯ ಚಲನವಲನ ಕಂಡು ಕೊನೆಗೆ ಸೆರೆ ಹಿಡಿದಿದ್ದಾರೆ.