ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಕನ್ನಡ ಭವನ ನಿರ್ಮಾಣ - ಸಿಎಂ ಸಿದ್ದರಾಮಯ್ಯ | JANATA NEWS
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಂಭ್ರಮ 50ರ ಸವಿನೆನಪಿಗಾಗಿ ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು, ಎಂದು ಘೋಷಿಸಿದ್ದಾರೆ.
ಅವರು ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
1956ರ ನವೆಂಬರ್ 1 ರಂದು ಕನ್ನಡ ಭಾಷಿಕ ಪ್ರದೇಶಗಳು ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ 1973ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು.
ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಸಂಭ್ರಮಾಚರಣೆ ಮಾಡಬೇಕಿತ್ತು. ಆದರೆ ಅವರು ಮಾಡಲಿಲ್ಲ. ನಮ್ಮ ಸರ್ಕಾರ ಈ ಸಂಭ್ರಮಾಚರಣೆಯನ್ನು ಆಚರಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಇಡೀ ವರ್ಷ ಕನ್ನಡ ನೆಲ, ಜಲ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ‘ಕರ್ನಾಟಕ ಸಂಭ್ರಮ- 50’ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಉಸಿರು ಕನ್ನಡವಾಗಬೇಕು. ಇಡೀ ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು.