ರಾಜ್ಯದಲ್ಲಿ ಬರ ವಿದ್ಯುತ್ ಅಭಾವ: ತೆಲಂಗಾಣ ಕಡೆಗೆ ಓಡುವ ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಕಡೆಗಣಿಸಿದ್ದಾರೆ | JANATA NEWS
ಬೆಂಗಳೂರು : ರಾಜ್ಯದಲ್ಲಿ ಬರಗಾಲ ಹಾಗೂ ವಿದ್ಯುತ ಅಭಾವ ಇರುವ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡಿ ಪರಿಸ್ಥಿತಿ ಅಧ್ಯಯನ ಮಾಡುವ ಬದಲು ಕಾಂಗ್ರೆಸ್ ನಾಯಕರು ಕಲೆಕ್ಷನ್ ಮಾಡಿದ ಹಣವನ್ನು ಹಂಚಲು ತೆಲಂಗಾಣದ ಕಡೆಗೆ ಓಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪ ಮಾಡಿದೆ
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, "ಬರಗಾಲ ಬಂದಿರುವಾಗಲೂ ಕಾಂಗ್ರೆಸ್ ಸರ್ಕಾರ ದುಂದುವೆಚ್ಚ ಮತ್ತು ಅಧಿಕಾರದ ಮೇಲಾಟದಲ್ಲಿ ಕಾಲಹರಣ ಮಾಡುತ್ತಿದೆಯೇ ಹೊರತು ರೈತರಿಗೆ-ಜನಸಾಮಾನ್ಯರಿಗಾಗಿ ಏನನ್ನೂ ಮಾಡುತ್ತಿಲ್ಲ.
ಬರದ ಕುರಿತಂತೆ ಬಿಜೆಪಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಧ್ಯಯನ ಕೈಗೊಳ್ಳುತ್ತಿದೆ. ಆದರೆ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಲು ವಿಪಕ್ಷಗಳು ಹೋಗಬೇಕಾಗಿ ಬಂದಿರುವುದು ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯದ ಪರಿಣಾಮ.
ರಾಜ್ಯದ ರೈತರು ಬೆಳೆದ ಬೆಳೆಗೆ ನೀರು ಒದಗಿಸುವ ಬದಲು, ಸ್ಟಾಲಿನ್ ನಾಡಿನಲ್ಲಿ ಹೆಚ್ಚುವರಿ ಪ್ರದೇಶದಲ್ಲಿ ಬೆಳೆದ ಬೆಳಗೆ ನೀರು ಒದಗಿಸಲಾಯಿತು. ಏಕೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ರೈತರ ಹಿತಕ್ಕಿಂತಲೂ ಹೆಚ್ಚಾಗಿ ಸ್ಟಾಲಿನ್ ಅವರ ಜತೆಗಿನ ಮೈತ್ರಿಯೇ ಅತಿಮುಖ್ಯ.
ಈಗಲೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೇರಿದಂತೆ ರಾಜ್ಯದ ಇತರೆ ಕಾಂಗ್ರೆಸ್ ನಾಯಕರೆಲ್ಲಾ ಕರ್ನಾಟಕದ #ATMSarkara ಕಲೆಕ್ಷನ್ ಮಾಡಿದ ಹಣ ಹಂಚಲು ತೆಲಂಗಾಣದ ಕಡೆಗೆ ಓಡಿದ್ದಾರೆ.
ಕರ್ನಾಟಕದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುತ್ತಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ವಿದ್ಯುತ್ ಅಭಾವದಿಂದ ನೇಕಾರರ ಬದುಕು ಬೀದಿಗೆ ಬಿದ್ದಿವೆ. ಕೃಷಿ ಕಾರ್ಮಿಕರು ಮಾತ್ರವಲ್ಲದೆ ಉದ್ಯಮಗಳೂ ಕರ್ನಾಟಕದಿಂದ ಗುಳೆ ಹೋಗುತ್ತಿವೆ. ಹೂಡಿಕೆ ಮಾಡಲು ಆಕರ್ಷಣೆಯ ಕೇಂದ್ರವಾಗಿದ್ದ ಬೆಂಗಳೂರು ಈಗ ತನ್ನೆಲ್ಲಾ ಹಿರಿಮೆ ಕಳೆದುಕೊಳ್ಳುತ್ತಿದೆ. 2,000 ಹೊಸ ಉದ್ಯೋಗಗಳ ನೇರ ಸೃಷ್ಟಿಗೆ ಕಾರಣವಾಗಬೇಕಿದ್ದ ಕೇಯ್ನೆಸ್ ಟೆಕ್ನಾಲಜಿಸ್‌ನ ₹2,800 ಕೋಟಿ ಹೂಡಿಕೆ ಹೈದರಾಬಾದ್‌ಗೆ ಹೋಗಿರುವುದು ಕಾಂಗ್ರೆಸ್ ಸರ್ಕಾರದ ಅಸಾಮರ್ಥ್ಯಕ್ಕೆ ಸಾಕ್ಷಿ.
ಇಷ್ಟೆಲ್ಲಾ ಆಗುತ್ತಿದ್ದರೂ, ತೆಲಂಗಾಣದ ಕಡೆಗೆ ಓಡುವ ಪುರುಸೊತ್ತಿರುವ ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯಗಳಿಗೆಲ್ಲಾ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡುವ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಬರ ಪರಿಸ್ಥಿತಿ ವಿವರಣೆಗೆ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷಗಳ ನಿಯೋಗ ಕಟ್ಟಿಕೊಂಡು ಹೋಗುವ ಮಾತುಗಳನ್ನಾಡಲು ಶುರು ಮಾಡಿದ್ದಾರೆ.
ಸರ್ವಪಕ್ಷಗಳ ನಿಯೋಗಕ್ಕಿಂತಲೂ ಮೊದಲು, ನೀವು ಕೊಡಿಸಿದ ಹೊಸ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿರುವ ನಿಮ್ಮ ಶಾಸಕರಿಗೆ ಎಸಿ ಕಾರಿನಿಂದ ಕೆಳಗಿಳಿದು ಬಿಸಿಲು ಹೇಗಿದೆ ಎಂದಾದರೂ ನೋಡಲು ಹೇಳಿ.