ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ತುರ್ತು ರಜೆ ಘೋಷಣೆ, ನಗರದಲ್ಲಿ ಭೀತಿ | JANATA NEWS
ಬೆಂಗಳೂರು : ಶುಕ್ರವಾರ ಮುಂಜಾನೆ ಸಿಲಿಕಾನ್ ಸಿಟಿ ಬೆಂಗಳೂರಿನ ಸುಮಾರು 30ಕ್ಕೂ ಅಧಿಕ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ನೀಡಲಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ತುರ್ತು ರಜೆ ಘೋಷಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದ್ದು, ಪೋಷಕರು ಹಾಗೂ ಮಕ್ಕಳನ್ನು ಕರೆದೊಯ್ಯಲು ಶಾಲೆಗಳತ್ತ ದೌಡಾಯಿಸಿದ್ದಾರೆ.
ಬಾಂಬ್ ಇಮೇಲ್ ಸುದ್ದಿ ಹರಡುತ್ತಿದ್ದಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಾಲಾ ಸಂಸ್ಥೆ ಸೇರಿದಂತೆ ನಗರದ ಜನಸಾಮಾನ್ಯರು ಸಹ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಟಿವಿ ಮದ್ಯಮಗಳ ವರದಿಗಳ ಪ್ರಕಾರ, ಇಸ್ಲಾಮಿಕ್ ಧರ್ಮಕ್ಕೆ ಪರಿವರ್ತನೆಯಾಗುವಂತೆ ಇಮೇಲ್ ನಲ್ಲಿ ಎಚ್ಚರಿಕೆ ನೀಡಲಾಗಿದ್ದು, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವ ಸಾದ್ಯತೆ ಇದೆ ಎನ್ನಲಾಗಿದೆ.
"ಬೆಂಗಳೂರು ನಗರದ ಕೆಲವು ಶಾಲೆಗಳಿಗೆ ಇಂದು ಬೆಳಗ್ಗೆ 'ಬಾಂಬ್ ಬೆದರಿಕೆ' ಎಂಬ ಇಮೇಲ್‌ಗಳು ಬಂದಿವೆ. ಪರಿಶೀಲಿಸಲು ಮತ್ತು ಖಚಿತಪಡಿಸಿಕೊಳ್ಳಲು ವಿಧ್ವಂಸಕ ವಿರೋಧಿ ಮತ್ತು ಬಾಂಬ್ ಪತ್ತೆ ಸ್ಕ್ವಾಡ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಕರೆಗಳು ಹುಸಿಯಾಗಿರುವಂತೆ ತೋರುತ್ತಿದೆ. ಆದರೂ, ಆರೋಪಿಗಳ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು.", ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.