ಕಂದಾಯ, ಪಂಚಾಯಿತಿ ಅಧಿಕಾರಿಗಳು ಲಂಚ ಕೇಳಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ | JANATA NEWS
ಕನಕಪುರ : ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕನಕಪುರದಲ್ಲಿ ಇಂದು 'ಜನತಾ ದರ್ಶನ' ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆ ಬರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭೂಮಿ ಮಾರಾಟ ಮಾಡಿಕೊಳ್ಳಬೇಡಿ. ಕನಕಪುರ, ಸಾತನೂರು, ಕೋಡಿಹಳ್ಳಿ ಸೇರಿ ದೊಡ್ಡ ಆಲಹಳ್ಳಿ ಇಲ್ಲೆಲ್ಲ ಮೊದಲು ಭೂಮಿಯ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ಎಂದು ನೀವೆ ಅಂದಾಜು ಮಾಡಿ. ನಾನು ಏನೇನು ಮಾಡಲು ಸಾಧ್ಯ, ಆ ಕೆಲಸಗಳನ್ನ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನಕಪುರ- ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ಕಾರ್ಯವನ್ನು ಉಯ್ಯಂಬಳ್ಳಿಯಿಂದ ಪ್ರಾರಂಭ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ- ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್ನಲ್ಲಿ ದೊರೆಯುತ್ತದೆ.
ಈಗಾಗಲೇ ಭೂಮಿ ಯೋಜನೆಯ ಅಡಿ ಪಹಣಿ- ಪೋಡಿ ದಾಖಲೆಗಳು ಸಿಗುತ್ತಿವೆ. ದಿಶಾ ವೆಬ್ಸೈಟಿನಲ್ಲಿ ನಿಮ್ಮ ಜಮೀನಿನ ವಾಸ್ತವ ಸ್ಥಿತಿ ತಿಳಿಯುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೇ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ನನ್ನ ಕ್ಷೇತ್ರದಲ್ಲೂ ಜನರಿಗೆ ಈ ಸೌಲಭ್ಯ ದೊರೆಯಲಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು, ತೊಂದರೆಗಳನ್ನು ಶೀಘ್ರ ಬಗೆಹರಿಸಿಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ರಾಮನಗರ ಬೆಂಗಳೂರಿಗೆ ಸೇರುವ ವಿಚಾರ ಮಾತನಾಡಿದ್ದಕ್ಕೆ ಎಷ್ಟೊಂದೆಲ್ಲಾ ವಿವಾದವನ್ನ ಮಾಡಿದ್ದಾರೆ. ಬೆಂಗಳೂರು ಎಂದ ತಕ್ಷಣ ಏನೇನೋ ವ್ಯಾಖ್ಯಾನ ಪ್ರಾರಂಭವಾಯಿತು. ಇದನ್ನ ವಿರೋಧ ಮಾಡುವವರೆಲ್ಲ ಮಾಡಲಿ ನಾವು ಮಾತ್ರ ಬೆಂಗಳೂರು ಜಿಲ್ಲೆಯವರು. ಸೂಕ್ತ ಕಾಲ ಬರುತ್ತದೆ. ನಾನು ನಿಮ್ಮ ಗೌರವ ಉಳಿಸಲು ಏನು ಮಾಡಬೇಕೋ ಮಾಡುತ್ತೇನೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸರ್ಕಾರಿ ಕಚೇರಿಗಳ ಲಂಚದ ವಿಚಾರವನ್ನ ಪ್ರಸ್ತಾಪ ಮಾಡಿದ ಡಿಸಿಎಂ, ಗರಂ ಆದರು. ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನ ಶೀಘ್ರದಲ್ಲೇ ಹಾಕಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.