ಕಾಂಗ್ರೆಸ್ ನಾಯಕರ ಮನೆ ಮೇಲೆ ನಡೆಯುವ ದಾಳಿ ಬಿಜೆಪಿಗರ ಮೇಲೆ ಏಕಿಲ್ಲ: ಸಿದ್ದರಾಮಯ್ಯ | JANATA NEWS
ಬೆಂಗಳೂರು : ಜಾರ್ಖಂಡ್ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರ ನಿವಾಸ ಸೇರಿದಂತೆ ಸಂಬಂಧಿಸಿದ ಸ್ಥಳಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ನಗದು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ, ಕೇಂದ್ರವು ಕೇವಲ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದೆ ಹೊರತು ಬಿಜೆಪಿಯನ್ನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ನಂತರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿವೆ. ಕಾಂಗ್ರೆಸ್ ನಾಯಕರ ಮನೆ ಮೇಲೆ ನಡೆಯುವ ದಾಳಿ ಬಿಜೆಪಿಗರ ಮೇಲೆ ಏಕಿಲ್ಲ. ಅವರ ಬಳಿಯೂ ಅಕ್ರಮ ಸಂಪತ್ತು ಸಂಗ್ರಹವಾಗಿದ್ದು, ಅವರ ಮನೆಗಳ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯವರನ್ನು ಗುರಿಯಾಗಿಸಿಕೊಂಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರ ಮೇಲೆ ದಾಳಿ ಮಾಡಿದರೆ ಅಪಾರ ಹಣ ಸಿಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಒಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದಲ್ಲಿ ಇದುವರೆಗೆ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ.
ಹುಡುಕಾಟದ ಭಾಗವಾಗಿ ಸಾಹು ಅವರಿಗೆ ಸಂಬಂಧಿಸಿರುವ ಸ್ಥಳಗಳಲ್ಲಿಯೂ ಶೋಧ ನಡೆಸಲಾಯಿತು. ವಶಪಡಿಸಿಕೊಂಡ ಮೊತ್ತವು 290 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ. ಇದು ಈವರೆಗಿನ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅತಿಹೆಚ್ಚು ಕಪ್ಪುಹಣವಾಗಿದೆ ಎಂದು ಅವರು ಹೇಳಿದರು.
ಕಪ್ಪು ಹಣವನ್ನು ಯಾರೇ ಸಂಗ್ರಹಿಸಿದ್ದರು ಅದು ತಪ್ಪು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾನೂನಿನ ಪ್ರಕಾರ ಕೆಲಸ ಮಾಡಲಿ ಱದು ಬಿಟ್ಟು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸರಿಯಲ್ಲ ಇದು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.