ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರಿಗೆ ಹಾಗೂ ಕರವೇ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಲು ಆರ್. ಅಶೋಕ ಒತ್ತಾಯ | JANATA NEWS
ಬೆಂಗಳೂರು : ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾರಾಯಣಗೌಡರಿಗೆ ಹಾಗೂ ಕರವೇ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ವಿರೋಧಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಕೆಲ ಕಿಡಿಗೇಡಿಗಳು ಕರವೇ ರಾಜ್ಯಾಧ್ಯಕ್ಷ ಶ್ರೀ ಕೆ.ನಾರಾಯಣಗೌಡರಿಗೆ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರ್. ಅಶೋಕ ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಮಾಲ್ ಆಫ್ ಏಷ್ಯಾದಲ್ಲಿ ಕನ್ನಡ ನಾಮಫಲಕ ಇಲ್ಲದ ಮಳಿಗೆಗಳಲ್ಲಿ ಸರ್ಕಾರದ ಅಧಿಕೃತ ಸೂಚನೆಯಂತೆ ಕನ್ನಡ ನಾಮಫಲಕ ಅಳವಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಕರವೇ ರಾಜ್ಯಾಧ್ಯಕ್ಷ ಶ್ರೀ ಕೆ.ನಾರಾಯಣಗೌಡರಿಗೆ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ."
"ಈ ಬೆಳವಣಿಗೆ ಅತ್ಯಂತ ಖಂಡನೀಯವಾಗಿದ್ದು, ಕನ್ನಡದ ನೆಲ, ಜಲ, ಭಾಷೆಗಾಗಿ ಹೋರಾಡುವವರ ದನಿ ಅಡಗಿಸಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳನ್ನ ಪತ್ತೆಹಚ್ಚಿ ಕಾನೂನಿನ ವಶಕ್ಕೆ ಒಪ್ಪಿಸಬೇಕು ಮತ್ತು ನಾರಾಯಣಗೌಡರಿಗೆ ಹಾಗೂ ಕರವೇ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ.", ಎಂದು ಹೇಳಿದ್ದಾರೆ.