ಕನ್ನಡಪರ ಹೋರಾಟಗಾರರ ವಿರುದ್ಧ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ | JANATA NEWS
ಬೆಂಗಳೂರು : ಬರುವ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಳಿಸುವುದಾಗಿ ಎಚ್ಚರಿಕೆ ನೀಡಿರುವ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರಿಗೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ ಅವರು, "ಎಪ್ಪತ್ತು ವರ್ಷ ಆಡಳಿತ ನೀಡಿದ ಕಾಂಗ್ರೆಸ್ ಬೇಕಾದಷ್ಟು ಪಾಠ ಕಲಿತಿದೆ. ಕಲಿಯುವುದು ಏನೂ ಉಳಿದಿಲ್ಲ ಎಂದಿದ್ದಾರೆ.
ಶಾಪಿಂಗ್ ಮಳಿಗೆಗಳ ಮೇಲೆ ದಾಳಿ ಮಾಡಿರುವುದು ಸರಿಯಲ್ಲ. ಕಾನೂನು ಕೈಗೆತ್ತಿಕೊಂಡಾಗ ಪೊಲೀಸರು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಗೃಹ ಸಚಿವರು ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿನ ವಾಣಿಜ್ಯ ಮಳಿಗೆಗಳು ಶೇಕಡಾ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಬಿಬಿಎಂಪಿ ಸೂಚಿಸಿದ್ದು, ಇಂದಿನವರೆಗೆ ಗಡುವು ನೀಡಿತ್ತು. ಈ ಕುರಿತು ಕನ್ನಡ ರಕ್ಷಣಾ ವೇದಿಕೆ(ಕರವೇ) ಬೀದಿಗಿಳಿದಿದ್ದು, ವ್ಯಾಪಾರ ಮಳಿಗೆಗೆ ನಾಮಫಲಕ ಬದಲಾವಣೆ ಮಾಡುವಂತೆ ಎಚ್ಚರಿಕೆ ನೀಡಿತ್ತು. ಈ ಮಧ್ಯೆ ನಿನ್ನೆ ಹೋರಾಟವನ್ನು ತೀವ್ರಮಟ್ಟಕ್ಕೆ ಕೊಂಡೊಯ್ದ ಕನ್ನಡಪರ ಹೋರಾಟಗಾರರು ಆಂಗ್ಲ ನಾಮಫಲಕ ಕಿತ್ತು ಹಾಕಲು ಹಾಗೂ ಮಸಿ ಬಳಿಯಲು ಮುಂದಾಗಿತ್ತು.