ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು...ನಿಮ್ಮ ಸ್ಥಾನಕ್ಕಾಗಲಿ ಶೋಭೆಯಲ್ಲ - ಸಿದ್ದರಾಮಯ್ಯ ಗೆ ಜೋಶಿ ಬುದ್ಧಿಮಾತು | JANATA NEWS

ನವದೆಹಲಿ : ರಾಜಕೀಯ ಮಾಡಬೇಕು ನಿಜ, ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ, ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಂಸತ್ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಬುಡ್ಡಿಮಾತು ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ತಿರಸ್ಕಾರಗೊಂಡಿರುವ ಕುರಿತು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಪ್ರಹ್ಲಾದ ಜೋಶಿ ಅವರು ಉತ್ತರಿಸಿದ್ದಾರೆ. "ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ", ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
"2007, 2009 ಹಾಗೂ 2010 ರಲ್ಲಿ ಅವಕಾಶ ಸಿಗಲಿಲ್ಲವಲ್ಲ, ಆಗ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಆಗ ಯಾಕೆ ಪ್ರಶ್ನಿಸಿ ಟ್ವೀಟ್ ಮಾಡಲಿಲ್ಲ, ಯಾಕೆ ಮಾಧ್ಯಮದಲ್ಲಿ ಯಾವ ಹೇಳಿಕೆಯೂ ನೀಡಲಿಲ್ಲ, ಓಹ್ ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಅಂತಲೇ? ಆಗ ಕರ್ನಾಟಕಕ್ಕೆ ಅವಮಾನ ಆಗಿರಲಿಲ್ಲವೇ?" ಎಂದು ಸಿದ್ದರಾಮಯ್ಯ ಅವರನ್ನು ಜೋಶಿ ಪ್ರಶ್ನಿಸಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ, ರಾಜಕೀಯ ಮಾಡಬೇಕು ನಿಜ, ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ. 2015 ರಿಂದ 2023 ವರೆಗೆ ಕರ್ನಾಟಕವು ಪ್ರತಿ ವರ್ಷವೂ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ.
26 ಜನವರಿ 2024 ರ ವರೆಗೆ ಕರ್ನಾಟಕಕ್ಕೆ ಪ್ರದರ್ಶಿಸುವ 14 ಅವಕಾಶಗಳಿದ್ದವು, ಅಂದರೆ ಕೇಂದ್ರದಲ್ಲಿ ಬಿಜೆಪಿ ಇದ್ದಾಗಲೇ 10 ಬಾರಿ ಕರ್ನಾಟಕದ ಸ್ರಬ್ಧಚಿತ್ರ ಪ್ರದರ್ಶನವಾಗಿದೆ. 2007, 2009 ಹಾಗೂ 2010 ರಲ್ಲಿ ಅವಕಾಶ ಸಿಗಲಿಲ್ಲವಲ್ಲ, ಆಗ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಆಗ ಯಾಕೆ ಪ್ರಶ್ನಿಸಿ ಟ್ವೀಟ್ ಮಾಡಲಿಲ್ಲ, ಯಾಕೆ ಮಾಧ್ಯಮದಲ್ಲಿ ಯಾವ ಹೇಳಿಕೆಯೂ ನೀಡಲಿಲ್ಲ, ಓಹ್ ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಅಂತಲೇ? ಆಗ ಕರ್ನಾಟಕಕ್ಕೆ ಅವಮಾನ ಆಗಿರಲಿಲ್ಲವೇ?
ಈ ಅವಕಾಶ ಕೊಡುವುದು ನಮ್ಮ ಕೈಲಿಲ್ಲ, ಎಲ್ಲವೂ ನ್ಯಾಯ ಬದ್ಧವಾಗಿ ನಡೆದಿದೆ ಹಾಗೂ ಆಯ್ಕೆಗಾಗಿ ಆಯಾ ಕ್ಷೇತ್ರದ ಹೆಸರಾಂತ ಕಲಾವಿದರನ್ನು ಹೊಂದಿದ ಸಮಿತಿ ರಚಿಸಲಾಗಿತ್ತು. ಕೇಂದ್ರ ರಾಜ್ಯಗಳ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಲಾಗುವುದಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ನಮ್ಮ ಸ್ತಬ್ಧಚಿತ್ರವನ್ನು ಮೊದಲು ಪ್ರದರ್ಶನ ಮಾಡಲು ಬಿಡಲಿಲ್ಲ, ಅವಮಾನವಾಯಿತು ಎಂದು ಹೇಳುವುದು ತರವಲ್ಲ.
ರೀ ಸಿದ್ದರಾಮಯ್ಯನವರೇ, ಉಚಿತ ಕೊಡುತ್ತೇವೆ ಎಂದು ಸುಳ್ಳು ಹೇಳಿ ಕರ್ನಾಟಕ ಜನತೆಯ ದಿಕ್ಕು ತಪ್ಪಿಸಿದ್ದು ಸಾಲದು ಅಂತ ಈಗ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡಿ ಮತ್ತದೇ ಚಾಳಿ ಹಿಡಿದಿದ್ದೀರಿ...", ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.