ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂಗೆ: ಕಾಂಗ್ರೆಸ್ ಕಿಡಿ | JANATA NEWS

ಬೆಂಗಳೂರು : ರಾಮಮಂದಿರ ಉದ್ಘಾಟನಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದ ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಸಂಸದ ಅನಂತ್ ಕುಮಾರ್ ಹೆಗಡೆ ಕುಂಭಕರ್ಣನಿದ್ದಂಗೆ, ನಾಲ್ಕುವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು. ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಮುಂದುವರಿಸುವ ಅನಂತ್ ಕುಮಾರ್ ಹೆಗಡೆಯಂತಹ ಕ್ರಿಮಿ ಕೀಟಗಳು ಈ ದೇಶಕ್ಕೆ ಕ್ಯಾನ್ಸರ್ ನಂತೆ ಕಾಡುತ್ತವೆ, ಈ ಕ್ಯಾನ್ಸರ್ ಗೆ ಸಂವಿಧಾನದಲ್ಲಿ ಔಷಧವಿದೆ ಎಂದು ಹೇಳಿದೆ,
ಕಾಂಗ್ರೆಸ್ ಪಕ್ಷದ ಬಗ್ಗೆ ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ, ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದು ಹರಿಹಾಯ್ದಿದೆ.
ನನಗೆ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಬಂದಿಲ್ಲ, ಹೀಗಾಗಿ ನಾನು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲ್ಲವೆಂದು ಹೇಳಿದ್ದ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.