ಸಾಮೂಹಿಕ ಅತ್ಯಾಚಾರ ಪ್ರಕರಣ : ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ - ಸಿಎಂ ಸಿದ್ದರಾಮಯ್ಯ | JANATA NEWS
ಹಾವೇರಿ : "ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯಾರನ್ನೂ ಕಾನೂನು ಕೈಗೆತೆಗೆದುಕೊಳ್ಳಲು ಬಿಡುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ಜರುಗಿಸುವ ಕೆಲಸ ಮಾಡುತ್ತೇವೆ", ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
"ಎಸ್.ಐ.ಟಿ ನಲ್ಲಿರುವವವರೂ ಪೊಲೀಸರೇ. ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನಿಸಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಾಗ ಗೃಹ ಸಚಿವರು ಭೇಟಿ ನೀಡಿದ್ದರು. ಭೇಟಿ ನೀಡುವಂತೆ ನಾನೇ ಸೂಚನೆ ನೀಡಿದ್ದೆ. ಇಲ್ಲಿ ಗೃಹ ಸಚಿವರು ಇರಲಿಲ್ಲ. ಕೇಂದ್ರದ ಮಾಜಿ ಸಚಿವ ಶಿವಣ್ಣ ಭೇಟಿ ನೀಡಿದ್ದಾರೆ. ಸಂತ್ರಸ್ತೆಯನ್ನು ಭೇಟಿ ಮಾಡಿ ಸಾಂತ್ವನ ಹೇಳುವುದು ಒಂದು ಭಾಗವಾದರೆ, ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುವುದು ಮತ್ತೊಂದು ಭಾಗ. ಎರಡನ್ನೂ ಮಾಡಿದ್ದೇವೆ.",
ತಮ್ಮ ಬಗ್ಗೆ ಏಕವಚನ ಬಳಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅನಂತಕುಮಾರ್ ಹೆಗಡೆಯವರು ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಗೆ ಏಕವಚನದಲ್ಲಿ ಮಾತನಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ. ಹೆಗಡೆ ಅವರು ಇವತ್ತಿನವರೆಗೆ ನಾಪತ್ತೆಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ. ಸಂಸದರಾಗಿ, ಮಾಜಿ ಮಂತ್ರಿಯಾಗಿ ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರೆಯೇ? ಇಂದಿನವರೆಗೆ ಬಡವರ ಸಮಸ್ಯೆ ಕೇಳಿದ್ದಾರೆಯೇ? ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು", ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.