ಇದು ನ್ಯಾಯ ಯಾತ್ರೆಯಲ್ಲ, ಮಿಯಾನ್ ಯಾತ್ರೆ... ನಕಲಿ ಗಾಂಧಿ - ಕಾಂಗ್ರೆಸ್ ಯಾತ್ರೆಗೆ ಅಸ್ಸಾಂ ಸಿಎಂ ವಾಗ್ದಾಳಿ | JANATA NEWS
ಗುವಾಹಟಿ : ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ನಗರದೊಳಗೆ ಪ್ರವೇಶವನ್ನು ಅನುಮತಿಸುವುದಿಲ್ಲ ಎಂದು ಗುರುವಾರ ಹೇಳಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆ ನಾಗಾಲ್ಯಾಂಡ್ ನಿಂದ ಅಸ್ಸಾಂಗೆ ತಲುಪಿದೆ. ಈ ಯಾತ್ರೆ ಅಸ್ಸಾಂನ 17 ಜಿಲ್ಲೆಗಳ ಮೂಲಕ ಸಾಗಲಿದೆ. ಇದರಲ್ಲಿ ಗುವಾಹಟಿ ನಗರವೂ ಸೇರಿದ್ದು, ಟ್ರಾಫಿಕ್ ಸಮಸ್ಯೆ ಕುರಿತು ಸಿಎಂ ಮಾತನಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ, ನಾವು ನಗರಗಳ ಒಳಗೆ ಪ್ರವೇಶಿಸಬಾರದು ಎಂದು ಹೇಳಿದ್ದೇವೆ, ಯಾವುದೇ ಪರ್ಯಾಯ ಮಾರ್ಗವನ್ನು ಕೇಳಿದರೂ ಅನುಮತಿ ನೀಡಲಾಗುವುದು, ಆದರೆ ನಗರದೊಳಗೆ ಹೋಗಬೇಕೆಂದು ಒತ್ತಾಯಿಸಿದರೆ, ನಾವು ಪೊಲೀಸರ ವ್ಯವಸ್ಥೆ ಮಾಡುವುದಿಲ್ಲ. ಪ್ರಕರಣ ದಾಖಲಿಸಿ ಕೊಳ್ಳುತ್ತೇವೆ. ಚುನಾವಣೆ ನಂತರ ಬಂಧಿಸುತ್ತೇವೆ. ಈಗಲೇ ಏನನ್ನೂ ಮಾಡುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
“ಇದು ನ್ಯಾಯ ಯಾತ್ರೆಯಲ್ಲ, ಮಿಯಾನ್ ಯಾತ್ರೆ. ಎಲ್ಲೆಲ್ಲಿ ಮುಸಲ್ಮಾನರಿದ್ದಾರೋ ಅಲ್ಲಿಗೆ ಪ್ರಯಾಣಿಸುತ್ತಿದ್ದಾರೆ", ಎಂದು ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಯನ್ನು ಲೇವಡಿ ಮಾಡಿದ್ದಾರೆ.
ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನನ್ನ ಪ್ರಕಾರ ಈ ಗಾಂಧಿ ಕುಟುಂಬ ದೇಶದಲ್ಲೇ ಅತ್ಯಂತ ಭ್ರಷ್ಟ ಕುಟುಂಬ. ಇವರು ದೇಶದ ಬೋಫೋರ್ಸ್‌ನಿಂದ ಹಿಡಿದು ಭೋಪಾಲ್ ಅನಿಲ ಹಗರಣದ ಆರೋಪಿಗಳನ್ನು ರಕ್ಷಿಸುವವರೆಗೆ ಇದ್ದಾರೆ. ಅತ್ಯಂತ ಭ್ರಷ್ಟ ಕುಟುಂಬವೆಂದರೆ ಅದು ಗಾಂಧಿ ಕುಟುಂಬ. ಇದು ಭ್ರಷ್ಟ ಮಾತ್ರವಲ್ಲ ನಕಲಿಯೂ ಆಗಿದೆ. ಅವರ ಮನೆತನದ ಹೆಸರು ಗಾಂಧಿ ಅಲ್ಲ. ಅವರು ತನ್ನ ನಕಲಿ ಹೆಸರಿನೊಂದಿಗೆ ತಿರುಗಾಡುತ್ತಿದ್ದಾರೆ", ಎಂದು ಆರೋಪಿಸಿದ್ದಾರೆ.