ಕೈಮುಗಿಯುವುದು ನಮ್ಮ ಸಂಪ್ರದಾಯ, ಅದು ಭಿಕ್ಷೆ ಬೇಡುವುದು ಅಂತ ಅಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ | JANATA NEWS
ಬೆಂಗಳೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಕಾರಣ ಏನೆಂಬುದು ಗೊತ್ತಿಲ್ಲ. ಏಕೆ ಈ ಬದಲಾವಣೆ ಮಾಡಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿದ್ದ "ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ" ಎಂಬ ಘೋಷವಾಕ್ಯ ಬದಲಾವಣೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿವಾದ ಸೃಷ್ಟಿಯಾಗಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯಿಸಿದರು.
“ಕೈ ಮುಗಿದು ಒಳಗೆ ಬಂದು ನಿಮ್ಮ ಹಕ್ಕುನ್ನು ಪ್ರತಿಪಾದಿಸಿ’ ಅಂತ ಇದ್ದರೆ ಚನ್ನಾಗಿ ಇರುತ್ತಿತ್ತು. ಬಿಜೆಪಿಯವರು ವಿರೋಧ ಮಾಡಲಿ. ಯಾವುದೇ ಕಾರಣಕ್ಕೂ ಕುವೆಂಪು ಅವರಿಗೆ ನಮ್ಮ ಸರ್ಕಾರ ಅವಮಾನ ಮಾಡಲ್ಲ” ಎಂದು ಸಚಿವರು ತಿಳಿಸಿದರು.
ನಮ್ಮ ಸರ್ಕಾರ ಕುವೆಂಪು ಆಶಯದ ರೀತಿಯಲ್ಲೇ ನಡೆದುಕೊಂಡು ಹೋಗುತ್ತಿದೆ. ಕೈಮುಗಿಯುವುದು ನಮ್ಮ ಸಂಪ್ರದಾಯ. ಅದು ಭಿಕ್ಷೆ ಬೇಡುವುದು ಅಂತ ಅಲ್ಲ ಎಂಬುದು ನನ್ನ ಅಭಿಪ್ರಾಯ. ಏನಾದರೂ ಉದಾಹರಣೆಗಾಗಿ ಆ ರೀತಿ ಮಾಡಿರಬಹುದು” ಎಂದರು.
ಅದಕ್ಕೂ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಿಷಯ, ನಮ್ಮ ಇಲಾಖೆಯಲ್ಲಿ ಬರುವುದಿಲ್ಲ ಆದರೂ ಸಂಬಂಧಪಟ್ಟ ಸಚಿವರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದ್ದರು.