ಸದನದ ಕಲಾಪಕ್ಕೆ ಕಾಂಗ್ರೆಸ್ ಮಂತ್ರಿಗಳ, ಶಾಸಕರ ಗೈರು : ವಿರೋಧಪಕ್ಷದ ನಾಯಕ ಆರ್.ಆಶೋಕ ಗರಂ | JANATA NEWS

ಬೆಂಗಳೂರು : ವಿಧಾನಸಭೆ ಕಲಾಪಗಳಲ್ಲಿ ಭಾಗವಹಿಸಲು ಯಾರೂ ಆಗಮಿಸದೆ ನಿರ್ಲಕ್ಷ್ಯ ದೋರಣೆ ಅನುಸರಿಸಿದ ಆಡಳಿತರೂಡ ಕಾಂಗ್ರೆಸ್ ಪಕ್ಷದ ಸಚಿವರ ವಿರುದ್ಧ ಸಭೆಯಲ್ಲಿ ಅವರಿಗೋಸ್ಕರ ಕಾದುಕುಳಿತಿದ್ದ ವಿರೋಧಪಕ್ಷದ ನಾಯಕ ಆರ್.ಆಶೋಕ ಅವರು ಗರಂ ಆಗಿದ್ದು, ಸಭಾಧ್ಯಕ್ಷ ಯುಟಿ.ಖಾದರ್ ಮುಂದೆ ತಮ್ಮ ಅಸಮಾಧಾನ ಹೊರಹಾಕಿ "ಈ ರೀತಿ ಸದನ ನಡೆಸುವ ಹಾಗಿಲ್ಲ. ಅಲ್ಲಿನೋಡಿ ಇವರಿಗೆ ಯಾರಿಗೂ ಆಸಕ್ತಿ ಇಲ್ಲ. ಟಿಎ ಡಿಎ ತಕೋತಾರೆ, ಇವರಿಗೇನು ಮಾನಮರ್ಯಾದೆ ಇಲ್ವಾ" ಎಂದು ಕೇಳಿದ್ದಾರೆ.
ಎಕ್ಸ್ ನಲ್ಲಿ ಕೂಡ ಈ ಕುರಿತು ಹೇಳಿರುವ ಅಶೋಕ್ ಅವರು, "ದೆಹಲಿ ಚಲೋ ಅಂತ ಹತ್ತಾರು ಕೋಟಿ ಖರ್ಚು ಮಾಡಿಕೊಂಡು ದೆಹಲಿಗೆ ಹೋಗಿ ಬೀದಿನಾಟಕ ಮಾಡಲು ಕಾಂಗ್ರೆಸ್ ಮಂತ್ರಿಗಳಿಗೆ, ಶಾಸಕರಿಗೆ ಸಮಯವಿದೆ. ಆಂತರಿಕ ಕಚ್ಚಾಟದ ಪಂಚಾಯಿತಿಗಾಗಿ ಮೂರು ದಿನಕ್ಕೊಮ್ಮೆ ಹೈಕಮಾಂಡ್ ಕದ ತಟ್ಟಲು ದೆಹಲಿಗೆ ಹೋಗಲು ಸಮಯವಿದೆ."
"ಆದರೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವ ವಿಧಾನ ಮಂಡಲಕ್ಕೆ ಬರಲು ಕಾಂಗ್ರೆಸ್ ಮಂತ್ರಿಗಳಿಗೆ, ಶಾಸಕರಿಗೆ ಪುರಸೊತ್ತೂ ಇಲ್ಲ, ಆಸಕ್ತಿಯೂ ಇಲ್ಲ."
"ಸದನದ ಕಲಾಪ ನಡೆಯುವಾಗ ಕನಿಷ್ಠ ಪಕ್ಷ ಸಚಿವರಾದರೂ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಬೇಕು ಎಂದು ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯುಟಿ.ಖಾದರ್ ಅವರಲ್ಲಿ ಮನವಿ ಮಾಡುತ್ತೇನೆ." ಎಂದು ಬರೆದಿದ್ದಾರೆ.